ನವದೆಹಲಿ, ಜ.6 , ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ದ ಹಿಂಸಾಚಾರಕ್ಕೆ ಸಂಬಂಧಿಸಿ ಸೋಮವಾರ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.ಗಲಭೆ ಮತ್ತು ಸರ್ಕಾರಿ ಆಸ್ತಿಗೆ ಹಾನಿ ಮಾಡುವ ಸೆಕ್ಷನ್‌ಗಳಡಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಹಿಂಸಾಚಾರ ಸಂಬಂಧ ಹಲವರು ನೀಡಿದ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಜೆಎನ್‌ಯುನಲ್ಲಿ ನಿನ್ನೆ ನಡೆದ ಹಿಂಸಾಚಾರದ ಬಗ್ಗೆ ನಾವು ಸ್ವಯಂಪ್ರೇರಿತರಾಗಿ ಎಫ್‌ಐಆರ್ ದಾಖಲಿಸಿದ್ದೇವೆ. ಸಾಮಾಜಿಕ ಜಾಲತಾಣ ಮತ್ತು ಸಿಸಿಟಿವಿ ದೃಶ್ಯಾವಳಿ ಕೂಡ ತನಿಖೆಯ ಒಂದು ಭಾಗವಾಗಲಿದೆ ಎಂದು ನೈರುತ್ಯ ದೆಹಲಿಯ ಡಿಸಿಪಿ ದೇವೇಂದ್ರ ಆರ್ಯ ತಿಳಿಸಿದ್ದಾರೆ.ಹಿಂಸಾಚಾರದ ಬಳಿಕ ಏಮ್ಸ್ ಆಸ್ಪತ್ರೆಗೆ 23 ವಿದ್ಯಾರ್ಥಿಗಳು ದಾಖಲಾಗಿದ್ದು, ಸೋಮವಾರ ಅವರನ್ನು ಮನೆಗೆ ಕಳುಹಿಸಲಾಗಿದೆ.ಭಾನುವಾರ ಸಂಜೆ ಅಪರಿಚಿತ ದುಷ್ಕರ್ಮಿಗಳ ಗುಂಪು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಪ್ರವೇಶಿಸಿ ಹಾಸ್ಟೆಲ್‌ಗಳ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿತ್ತು. ಇದರಲ್ಲಿ ಜೆಎನ್‌ಯುಎಸ್‌ಯು ಅಧ್ಯಕ್ಷೆ, ಪ್ರಧಾನ ಕಾರ್ಯದರ್ಶಿ ಮತ್ತು ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡು ಏಮ್ಸ್ ಗೆ ದಾಖಲಾಗಿದ್ದರು.ಗಲಭೆಯ ಬಳಿಕ ದೆಹಲಿ ಪೊಲೀಸರು ಕ್ಯಾಂಪಸ್ ಒಳಗೆ ಪ್ರವೇಶಿಸಿದ್ದರು.