ಬೆಂಗಳೂರು, ಅ 10: ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಪರಿಹಾರ ಬಿಡುಗಡೆಯಲ್ಲಿ ಕೇಂದ್ರದ ತಾರತಮ್ಯ, ನಿರ್ಲಕ್ಷ್ಯ ಖಂಡಿಸಿ ಜೆಡಿಎಸ್ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಪಕ್ಷ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ವಿರೋಧಿಸಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ನೇತೃತ್ವದ ಪ್ರತಿಭಟನಾ ಮೆರವಣಿಗೆ ಪಕ್ಷದ ಪ್ರಧಾನ ಕಚೇರಿ ಜೆ.ಪಿ.ಭವನದಿಂದ ಹಿಡಿದು ಮೌರ್ಯ ವೃತ್ತ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನವನದತ್ತ ಸಾಗಿತು.
ಪ್ರತಿಭಟನೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ವಿವಿಧ ಜಿಲ್ಲೆಗಳ ನೂರಾರು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಎಚ್.ಡಿ ದೇವೇಗೌಡ ಮಾತನಾಡಿ, ರಾಜ್ಯದ ನೆರೆ ಸಂಕಷ್ಟಕ್ಕೆ 36 ಸಾವಿರ ಕೋಟಿ ರೂ.ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರಕ್ಕೆ ಮನವಿ ಮಾಡಿದ್ದರಾದರೂ ಕೇಂದ್ರ ಕೇವಲ 1200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಮೈತ್ರಿ ಸರ್ಕಾರ ಬಿಡುಗಡೆಗೊಳಿಸಿದ್ದ ಕ್ಷೇತ್ರಾನುದಾನವನ್ನು ಈಗಿನ ಬಿಜೆಪಿ ಸರ್ಕಾರ ಸಂಪೂರ್ಣ ರದ್ದು ಮಾಡಿರುವುದು ಹೇಯ್ಯ ಕೃತ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸರ್ಕಾರಗಳ ಇಂತಹ ಕೃತ್ಯ ವಿರೋಧಿಸಿ ನಮ್ಮ ಪಕ್ಷದಿಂದ ಮಾತ್ರ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಅಧಿವೇಶನದ ಕಲಾಪದ ವರದಿಗೆ ಮಾಧ್ಯಮಗಳಿಗೆ ನಿರ್ಬಂಧದಂತಹ ಹೀನಾಯ ಕೃತ್ಯ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಏನೋ ಕಾದಿದೆ ಎಂಬ ಅಪಾಯದ ಮುನ್ಸೂಚನೆಯಾಗಿದೆ ಎಂದು ದೇವೇಗೌಡ ಆತಂಕ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವಿರೋಧಿ ನೀತಿಯಾದ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವುದು ಸರಿಯಾದ ರೀತಿಯ ಕ್ರಮವಲ್ಲ. ಸರ್ಕಾರದ ಈ ಧೋರಣೆಯನ್ನಿ ಖಂಡಿಸುವುದಾಗಿ ಹೇಳಿದ ಅವರು, ಪ್ರಜಾಪ್ರಭುತ್ವದಲ್ಲಿ ಈ ರೀತಿಯಲ್ಲಿ ನಡುವಳಿಕೆ ಸಹಿಸಲು ಸಾಧ್ಯವಿಲ್ಲ ಎಂದರು.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆಸ್ತಿಗಳ ಮೇಲೆ ಐಟಿ ದಾಳಿಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.