ಬೆಂಗಳೂರು, ಮಾ.30, ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡು ಹಳ್ಳಿಗಳತ್ತ ಹೊರಟು, ಮಾರ್ಗ ಮಧ್ಯದಲ್ಲಿ ಸಿಲುಕಿರುವ ಕೋಟ್ಯಂತರ ಜನರನ್ನು ಸ್ವಗ್ರಾಮಗಳಿಗೆ ತಲುಪಿಸಲು ಸೇನೆಯನ್ನು ನಿಯೋಜಿಸುವಂತೆ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ಕೋಟ್ಯಂತರ ಮಂದಿಯ ದುಡಿಮೆ ನಿಂತಿದೆ. ಉದ್ಯೋಗ ಕಳೆದುಕೊಂಡಿರುವ ಜನರು ಹಳ್ಳಿಗಳತ್ತ ಹೊರಟಿದ್ದಾರೆ. ಕೋಟ್ಯಂತರ ಜನರು ಮಾರ್ಗ ಮಧ್ಯದಲ್ಲಿ ಸಿಲುಕಿದ್ದಾರೆ. ಇದರಿಂದಾಗಿ ಕೊರೊನಾ ವೈರಸ್ ಸೋಂಕಿಗಿಂತಲೂ ಭೀಕರವಾದ ವಿಪತ್ತು ನಿರ್ಮಾಣವಾಗುವ ಅಪಾಯವಿದೆ ಎಂದು ಪ್ರಧಾನಿಗೆ ಬರೆದಿರುವ ನಾಲ್ಕು ಪುಟಗಳ ಪತ್ರದಲ್ಲಿ ಫಾರೂಕ್ ಉಲ್ಲೇಖಿಸಿದ್ದಾರೆ.
ಲಾಕ್‌ಡೌನ್ ಕಾರಣದಿಂದ ಸಾರ್ವಜನಿಕ ಸಾರಿಗೆ ಸಂಪೂರ್ಣವಾಗಿ ಸ್ಥಗಿತವಾಗಿದೆ. ಉದ್ಯೋಗವೂ ಇಲ್ಲದೆ, ಸೋಂಕಿನ ಭೀತಿಯಿಂದ ಜನರು ಹೆದ್ದಾರಿಗಳಲ್ಲಿ ಬರುತ್ತಿದ್ದಾರೆ. ದೆಹಲಿ, ಮುಂಬೈ, ಪುಣೆ, ಬೆಂಗಳೂರಿನಂತಹ ನಗರಗಳಲ್ಲಿ ಕೆಲಸ ಕಳೆದುಕೊಂಡ ಜನರು 500 ಕಿ.ಮೀ. ದೂರವನ್ನು ನಡೆದೇ ತಲುಪಲು ಹೊರಟಿದ್ದಾರೆ. ಮಾರ್ಗ ಮಧ್ಯದಲ್ಲೇ ಅವರ ಜೀವ ಅಪಾಯಕ್ಕೆ ಸಿಲುಕುವ ಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ. ನಡು ದಾರಿಯಲ್ಲಿ ಸಿಲುಕಿರುವ ಜನರನ್ನು ಅವರ ಸ್ವಗ್ರಾಮಗಳಿಗೆ ತಲುಪಿಸಲು ವಾಹನಗಳೊಂದಿಗೆ ಸೇನಾ ಪಡೆಯ ಯೋಧರನ್ನು ನಿಯೋಜಿಸಬೇಕು. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‌ಗಳ ಮಾಹಿತಿ ಆಧರಿಸಿ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕು. ಲಾಕ್‌ಡೌನ್ ಅವಧಿಯಲ್ಲಿ ಎಲ್ಲ ಸಾಲಗಳ ಮೇಲಿನ ಬಡ್ಡಿಯನ್ನು ರದ್ದು ಮಾಡಬೇಕು ಎಂದು ಫಾರೂಕ್ ಒತ್ತಾಯಿಸಿದ್ದಾರೆ.