ಬೆಂಗಳೂರು, ಫೆ. 17, ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು ಎರಡೂ ಮನೆಯಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಜೆಡಿಎಸ್ ತಂತ್ರ ರೂಪಿಸಿದೆ. ಇಂದು ಕಲಾಪ ಆರಂಭಕ್ಕೂ ಮುನ್ನ ಜೆಡಿಎಸ್ ಶಾಸಕಾಂಗ ಸಭೆ ನಡೆಸಿತು. ಕಲಾಪದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಅಡಕತ್ತರಿಯಲ್ಲಿ ಸಿಲುಕಿಸಲು ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಪೂರ್ವ ಸಿದ್ಧತೆ ನಡೆಸಲಾಯಿತು.ಮೇಲ್ಮನೆ ಚುನಾವಣಾ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಲು ಸಭೆಯಲ್ಲಿ ಜೆಡಿಎಸ್ ನಿರ್ಧರಿಸಿತಾದರೂ ಬಿಜೆಪಿ ನಾಯಕರೊಡನೆ ಜಿ.ಟಿ.ದೇವೇಗೌಡ ಸೇರಿ ಮತದಾನ ಮಾಡಿದ್ದು ಕುಮಾರಸ್ವಾಮಿ ಕಣ್ಣನ್ನು ಕೆಂಪಗಾಗಿಸಿತು.ಮೈತ್ರಿ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮುಖ್ಯಂಮತ್ರಿಯಾಗಿದ್ದಾಗ ಮಂಜೂರಾಗಿರುವ ಅನುದಾನವನ್ನು ಸ್ಥಗಿತಗೊಳಿಸಿರುವುದು, ಯೋಜನೆಗಳನ್ನು ಸ್ಥಳಾಂತರ ಮಾಡಿರುವುದು ಹಾಗೂ ಯಡಿಯೂರಪ್ಪ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳ ಅನುದಾನದ ಕಡತಕ್ಕೆ ಸಹಿ ಹಾಕದೇ ದ್ವೇಷದ ರಾಜಕಾರಣ ಮಾಡಲಿದ್ದಾರೆ ಎಂಬ ಆರೋಪವನ್ನು ಕುಮಾರಸ್ವಾಮಿ ಮಾಡಲಿದ್ದಾರೆ.
ಸಾಲಮನ್ನಾ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯೋಜನೆ ರೂಪಿಸಿರುವ ಕುಮಾರಸ್ವಾಮಿ, ಸದನದಲ್ಲಿ ರೈತರ ವಿರೋಧಿ ಬಿಜೆಪಿ ಸರ್ಕಾರ ಎಂದು ಬಿಂಬಿಸಲು ಅಸ್ತ್ರ ಪ್ರಯೋಗಿಸಲು, ಮಂಗಳೂರು ಗಲಭೆ, ಬಾಂಬ್ ಪತ್ತೆ ಪ್ರಕರಣ ,ಗೋಲಿಬಾರ್ ಪ್ರಕರಣದಲ್ಲೂ ಬಿಜೆಪಿಯ ವಿರುದ್ಧ ವಾಗ್ದಾಳಿಗೆ ಕುಮಾರಸ್ವಾಮಿ ಸಿದ್ಧರಾಗಿದ್ದಾರೆ.ಇನ್ನು ಇತ್ತೀಚೆಗೆ ಸಚಿವ ಆರ್. ಅಶೋಕ್ ಪುತ್ರ ನಡೆಸಿದ ಅಪಘಾತ ಪ್ರಕರಣದ ಬಗ್ಗೆಯೂ ಪ್ರಸ್ತಾಪ ಮಾಡಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ಪ್ರವಾಹದ ಅನುದಾನದ ವಿಚಾರದಲ್ಲಿಯೂ ಬಿಜೆಪಿಯ ವೈಫಲ್ಯವನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸನ್ನದ್ಧರಾಗಿದ್ದಾರೆ.