ಬೆಂಗಳೂರು,ಫೆ.14: (ಯುಎನ್ಐ) ನಶಿಸಿಹೋಗುತ್ತಿರುವ ಗ್ರಾಮೀಣ ಕಲೆಗಳನ್ನು ಉತ್ತೇಜಿಸಿ, ಯುವಜನರನ್ನು ಜನಪದ ಕಲೆಯತ್ತ ಆಕರ್ಶಿಸುವ ಸಲುವಾಗಿ 'ಕಾಲೇಜಿನಿಂದ ಕಾಲೇಜಿಗೆ ಜಾನಪದ' ಎಂಬ ಕಾರ್ಯಕ್ರಮವನ್ನು ಜಾನಪದ ಲೋಕದಲ್ಲಿ ನಡೆಸಲಾಗುತ್ತಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾನಪದ ಲೋಕವು 25 ವರ್ಷಗಳನ್ನು ಪೂರೈಸಿದ್ದು, ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆ.16 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳ್ಳಿಹಬ್ಬವನ್ನು ನಡೆಸಲಾಗುವುದು ಎಂದು ಅವರು ಹೇಳಿದರು. ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಸಚಿವ ಸಿ.ಟಿ.ರವಿ. ಶಾಸಕ ಉದಯ ಬಿ.ಗರುಡಾಚಾರ್, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಸಾಹಿತಿಗಳಾದ ಡಾ.ಸಿದ್ದಲಿಂಗಯ್ಯ, ಗೊ.ರು ಚೆನ್ನಬಸಪ್ಪ, ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಜಾನಪದ ಕ್ಷೇತ್ರದಲ್ಲಿ ಅವಿರತ ಶ್ರಮಿಸಿರುವ ಹಿರಿಯ ಕಲಾವಿದರಿಗೆ ಲೋಕಶ್ರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದ ಅವರು, ಬೆಳ್ಳಿ ಹಬ್ಬದ ಸಂಚಿಕೆ ಮತ್ತು ಜಾನಪದ ಕೃತಿಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಅಂದು ದೇಶ ವಿದೇಶಗಳ ಜಾನಪದ ಕಲಾವಿದರು ಪಾಲ್ಗೊಂಡು ಜಾನಪದ ಕಲಾ ಪ್ರಕಾರಗಳನ್ನು ಅನಾವರಣಗೊಳಿಸಲಿದ್ದಾರೆ. ಫೆ.17 ಮತ್ತು 18 ರಂದು ರಾಮನಗರದ ಜಾನಪದ ಲೋಕದಲ್ಲಿ ಜಾನಪದ ಲೋಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಪ್ರೊ.ಹಂಪಾ ನಾಗರಾಜಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.