ಅಯ್ಯರ್-ರಾಹುಲ್ ಆರ್ಭಟ : ನ್ಯೂಜಿಲೆಂಡ್‌ಗೆ 348 ರನ್ ಗುರಿ ನೀಡಿದ ಭಾರತ

ಹ್ಯಾಮಿಲ್ಟನ್, ಫೆ 5 ,ಶ್ರೇಯಸ್ ಅಯ್ಯರ್(103 ರನ್, 107 ಎಸೆತಗಳು) ಚೊಚ್ಚಲ ಶತಕ  ಹಾಗೂ ಕೆ.ಎಲ್ ರಾಹುಲ್ (ಔಟಾಗದೆ 88 ರನ್) ಅರ್ಧಶತಕದ ಬಲದಿಂದ ಭಾರತ ತಂಡ ಮೊದಲನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಕಠಿಣ ಸವಾಲು ನೀಡುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಸೆಡಾಕ್ ಪಾರ್ಕ್ ಅಂಗಳದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಿಗೆ  ನಾಲ್ಕು ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿತು. ಆ ಮೂಲಕ ಕಿವೀಸ್ ಗೆ 348 ರನ್ ಗುರಿ ನೀಡಿತು.

ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಪೃಥ್ವಿ ಶಾ ಜೋಡಿ ನಿರಾಸೆ ಮೂಡಿಸಲಿಲ್ಲ. ಈ ಜೋಡಿ ಮುರಿಯದ ಮೊದಲನೇ ವಿಕೆಟ್ ಗೆ 50 ರನ್ ಕಲೆಹಾಕಿತು. 20 ರನ್ ಗಳಿಸಿ ಆಡುತ್ತಿದ್ದ ಪೃಥ್ವಿ ಶಾ ಕಾಲಿನ್ ಡಿ ಗ್ರ್ಯಾಂಡ್ಹೋಮ್‌ಗೆ ವಿಕೆಟ್ ಒಪ್ಪಿಸಿದರು. 31 ಎಸೆತಗಳಲ್ಲಿ 32 ರನ್ ಗಳಿಸಿ ಭರವಸೆ ಮೂಡಿಸಿದ್ದ ಮಯಾಂಕ್ ಕೂಡ ಹೆಚ್ಚು ಹೊತ್ತು ಉಳಿಯಲಿಲ್ಲ.

ಕೊಹ್ಲಿ-ಅಯ್ಯರ್ ಅದ್ಭುತ ಜತೆಯಾಟ: 

ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಜೋಡಿ ಮನಮೋಹಕ ಬ್ಯಾಟಿಂಗ್ ಮಾಡಿತು. ಈ ಜೋಡಿ 102 ರನ್ ಜತೆಯಾಟ ಕಾಣಿಕೆಯನ್ನು ತಂಡಕ್ಕೆ ನೀಡಿತು. 63 ಎಸೆತಗಳಲ್ಲಿ ಆರು ಬೌಂಡರಿಯೊಂದಿಗೆ ಕೊಹ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ನಂತರ, ಇಶ್ ಸೋಧಿಗೆ ಕ್ಲೀನ್ ಬೌಲ್ಡ್ ಆದರು. 

ನಾಲ್ಕನೇ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಸಮಯೋಜಿತ ಬ್ಯಾಟಿಂಗ್ ಮಾಡಿದರು. ಎದುರಿಸಿದ 107 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 11 ಬೌಂಡರಿಯೊಂದಿಗೆ 103 ರನ್ ಗಳಿಸಿ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿ ನಾಲ್ಕನೇ ಕ್ರಮಾಂಕಕ್ಕೆ ಹೊಸ ಭರವಸೆ ಮೂಡಿಸಿದರು. ಅಲ್ಲದೇ, ಕೆ.ಎಲ್ ರಾಹುಲ್ ಅವರೊಂದಿಗೆ 136 ರನ್ ಜತೆಯಾಟವಾಡಿ 300ರ ಸಮೀಪ ತಂಡವನ್ನು ಕೊಂಡೊಯ್ದರು.

ಚುಟುಕು ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದರು. ಕೇವಲ 64 ಎಸೆತಗಳಲ್ಲಿ 88 ರನ್ ಸಿಡಿಸಿದರು. ಇವರ ಸ್ಫೋಟಕ ಇನಿಂಗ್ಸ್‌ನಲ್ಲಿ ಬರೋಬ್ಬರಿ ಆರು ಸಿಕ್ಸರ್ ಹಾಗೂ ಮೂರು ಬೌಂಡರಿಗಳು ಒಳಗೊಂಡಿವೆ. ಕೊನೆಯಲ್ಲಿ ಕೇದಾರ್ ಜಾಧವ್ ಕೇವಲ 15 ಎಸೆತಗಳಲ್ಲಿ 26 ರನ್ ಚಚ್ಚಿದರು.ಟಿಮ್ ಸೌಥಿ 85 ರನ್ ನೀಡಿ ಎರಡು ವಿಕೆಟ್ ಪಡೆದರು. ಗ್ರ್ಯಾಂಡ್ಹೋಮ್ ಮತ್ತು ಇಶ್ ಸೋಧಿ ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಭಾರತ: ನಿಗದಿತ 50 ಓವರ್ ಗಳಿಗೆ 347/4 (ಶ್ರೇಯಸ್ ಅಯ್ಯರ್ 103, ಕೆ.ಎಲ್ ರಾಹುಲ್ ಔಟಾಗದೆ 88, ವಿರಾಟ್ ಕೊಹ್ಲಿ 51, ಕೇದಾರ್ ಜಾಧವ್ ಔಟಾಗದೆ 26; ಟಿಮ್ ಸೌಥಿ 85 ಕ್ಕೆ 2, ಕಾಲಿನ್ ಡಿ ಗ್ರ್ಯಾಂಡ್ಹೋಮ್ 41 ಕ್ಕೆ 1, ಇಶ್ ಸೋಧಿ 27 ಕ್ಕೆ 1)