ನವದೆಹಲಿ, ಮೇ 18,1990ರ ದಶಕದಲ್ಲಿ ಭಾರತ ತಂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಅತಿಯಾಗಿ ಅವಲಂಬಿಸಿತ್ತು ಎಂದು ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಅತ್ಯುತ್ತಮ ಬ್ಯಾಟ್ಸ್ ಮನ್ ಗಳ ಪೈಕಿ ಒಬ್ಬರಾಗಿರುವ ತೆಂಡೂಲ್ಕರ್, 1989ರಲ್ಲಿ ಪಾಕಿಸ್ತಾನ ವಿರುದ್ಧ ಪದಾರ್ಪಣೆ ಮಾಡಿದರು. ಆಡಿದ 664 ಅಂತಾರಾಷ್ಟ್ರೀಯ ಪಂದ್ಯಗಳಿಂದ 34 ಸಾವಿರಕ್ಕೂ ಹೆಚ್ಚು ರನ್ ಕಲೆಹಾಕಿರುವ ಮಾಸ್ಟರ್ ಬ್ಲಾಸ್ಟರ್, 100 ಶತಕಗಳನ್ನು ಗಳಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಎನಿಸಿದ್ದಾರೆ.
"89ರಲ್ಲಿ ಪದಾರ್ಪಣೆ ಮಾಡಿದ ತೆಂಡೂಲ್ಕರ್, ಒಂದು ವರ್ಷ ಕಳೆಯುವಷ್ಟರಲ್ಲಿ ನ್ಯೂಜಿಲೆಂಡ್ ಎದುರು 80 ರನ್ ಗಳಿಸಿದರು. ಬಳಿಕ 1991-92ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಶತಕ ಬಾರಿಸಿದರು. ಇಡೀ ವಿಶ್ವವೇ ಅವರತ್ತ ವಿಶ್ವಶ್ರೇಷ್ಠ ಆಟಗಾರನೆಂದು ತಿರುಗಿ ನೋಡುತ್ತಿತ್ತು. ವಯಸ್ಸು ಇಲ್ಲಿ ಅತಿ ಮುಖ್ಯ ವಿಚಾರ. ಅವರಿಗೆ ಆಗ ಕೇವಲ 17 ವರ್ಷ. ತಂಡದಲ್ಲಿ ಇದ್ದ ನಮ್ಮೆಲ್ಲರಿಗೂ ಈ ಹುಡುಗ ಮತ್ತೊಂದು ಹಂತದಲ್ಲಿ ಇದ್ದಾನೆಂಬುದರ ಅರಿವಾಗಿತ್ತು," ಎಂದು ಟೀಮ್ ಇಂಡಿಯಾದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜತೆಗಿನ ಇನ್‌ಸ್ಟಾಗ್ರಾಮ್ ಲೈವ್ ಚಾಟ್‌ನಲ್ಲಿ ಸಂಜಯ್ ಹೇಳಿದ್ದಾರೆ.
"ದುರದೃಷ್ಟವಶಾತ್ 96/97ರ ಹೊತ್ತಿಗೆ ಭಾರತ ತಂಡ ಸಚಿನ್ ಮೇಲೆ ಅತಿಯಾದ ಅವಲಂಬನೆಯಾಗಿತ್ತು. ಯಾಕೆಂದರೆ ಅಷ್ಟು ಸ್ಥಿರ ಪ್ರದರ್ಶನ ನೀಡುತ್ತಿದ್ದರು. ಉತ್ತಮ ಎಸೆತಗಳನ್ನೂ ಬಂಡರಿಗೆ ಅಟ್ಟಿ ಅಧಿಕಾರಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತದ ಮೊತ್ತ ಮೊದಲ ಬ್ಯಾಟ್ಸ್‌ಮನ್ ಅವರಾಗಿದ್ದರು. ಅಲ್ಲಿಯವರೆಗೂ ಸುನಿಲ್ ಗವಾಸ್ಕರ್ ರೀತಿ ಭಾರತೀಯ ಬ್ಯಾಟ್ಸ್‌ಮನ್‌ಗಳು ರಕ್ಷಣಾತ್ಮಕ ಆಟವಾಡಿ, ಕೆಟ್ಟ ಎಸೆತಗಳಲ್ಲಿ ಮಾತ್ರವೇ ಬೌಂಡರಿ ಗಳಿಸುತ್ತಿದ್ದರು. ಬೌಲರ್‌ಗಳಿಗೆ ಮೊದಲ ಎರಡು ಅವಧಿ ಗೌರವ ಸಲ್ಲಿಸಿ ನಂತರ ಅವರು ದಣಿದ ಮೇಲೆ ರನ್ ಗಳಿಸುವುದು. ಆದರೆ ಸಚಿನ್ ಉತ್ತಮ ಬೌಲರ್‌ಗೆ ಆರಂಭದಿಂದಲೇ ರನ್ ಬಾರಿಸಲು ಶುರು ಮಾಡುತ್ತಿದ್ದರು," ಎಂದು ಸಂಜಯ್ ವಿವರಿಸಿದ್ದಾರೆ.