ಪುಣೆ, ಅ 13: ಆರ್. ಅಶ್ವಿನ್(8 ಕ್ಕೆ 2) ಸ್ಪಿನ್ ಮೋಡಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಭಾರತದ ವಿರುದ್ಧ ಆರಂಭಿಕ ಆಘಾತಕ್ಕೆ ಸಿಲುಕಿದೆ.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಫಾಲೋ ಆನ್ಗೆ ಒಳಗಾಗಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪ್ರವಾಸಿ ಆಫ್ರಿಕಾ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ 27 ಓವರ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು 74 ರನ್ ಗಳಿಸಿ ಆರಂಭಿಕ ಆಘಾತಕ್ಕೆ ಒಳಗಾಗಿದೆ.
ಕಳೆದ 2008ರ ಬಳಿಕ ದಕ್ಷಿಣ ಆಫ್ರಿಕಾ ತಂಡವನ್ನು ಪಾಲೋ ಆನ್ಗೆ ತಳ್ಳಿದ ವಿಶ್ವದ ಮೊದಲನೇ ತಂಡ ಎಂಬ ಕೀರ್ತಿಗೆ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಭಾನುವಾರ ಭಾಜನವಾಯಿತು.
ಭಾರತ ತಂಡ, ಪ್ರವಾಸಿ ದಕ್ಷಿಣ ಆಫ್ರಿಕಾವನ್ನು ಫಾಲೋ ಆನ್ ನೀಡಿರುವುದು ಇತಿಹಾಸದಲ್ಲಿ ಇದೇ ಮೊದಲು. ಪ್ರಥಮ ಇನಿಂಗ್ಸ್ ನಲ್ಲಿ ಭಾರತ 601 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಪ್ರಥಮ ಇನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ 275 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತ 326 ರನ್ ಮುನ್ನಡೆ ಪಡೆಯಿತು. ಇದರ ಫಲವಾಗಿ ಕೊಹ್ಲಿ ಫಾಲೋ ಆನ್ ಪಡೆಯುವ ಅವಕಾಶ ಪಡೆದು, ಪ್ರವಾಸಿ ತಂಡಕ್ಕೆ ದ್ವಿತೀಯ ಇನಿಂಗ್ಸ್ ಮಾಡುವಂತೆ ಹೇಳಿದರು.
ದಕ್ಷಿಣ ಆಫ್ರಿಕಾ ತಂಡಕ್ಕೆ ಫಾಲೋ ಆನ್ ನೀಡಿದ್ದ ಕೊನೆಯ ತಂಡ ಇಂಗ್ಲೆಂಡ್ ಆಗಿತ್ತು. ಇದರ ಪಟ್ಟಿಯಲ್ಲಿ ಈಗ ಭಾರತ ಸೇರ್ಪಡೆಯಾಗಿದೆ.
ಫಾಲೋ ಆನ್ ಪಡೆದು ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಏಡೆನ್ ಮರ್ಕರಮ್ ಅವರನ್ನು ಇಶಾಂತ್ ಶರ್ಮಾ ಅವರು ಎಲ್ಬಿಡಬ್ಲ್ಯು ಬಲಗೆ ಬೀಳಿಸಿದರು. ನಂತರ ಬಂದ ಥ್ಯೂನಿಸ್ ಡಿ ಬ್ರೂಯಿನ್ (8) ಅವರನ್ನು ಉಮೇಶ್ ಯಾದವ್ ಔಟ್ ಮಾಡಿದರು.
ಪ್ರಥಮ ಇನಿಂಗ್ಸ್ ನಾಲ್ಕು ವಿಕೆಟ್ ಪಡೆದಿದ್ದ ಆರ್. ಅಶ್ವಿನ್ ದ್ವಿತೀಯ ಇನಿಂಗ್ಸ್ ನಲ್ಲೂ ಅದೇ ಮೋಡಿ ಮಾಡಿದರು. ಆಫ್ರಿಕಾದ ದೊಡ್ಡ ವಿಕೆಟ್ ಡೀನ್ ಎಲ್ಗರ್(48ರನ್) ಹಾಗೂ ನಾಯಕ ಫಾಫ್ ಡುಪ್ಲೆಸಿಸ್(5) ಅವರನ್ನು ಅಶ್ವಿನ್ ಔಟ್ ಮಾಡಿದರು.
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟಿಂಗ್ ಮಾಡುತ್ತಿದ್ದ ಡೀನ್ ಎಲ್ಗರ್ 72 ಎಸೆತಗಳಲ್ಲಿ ಎಂಟು ಬೌಂಡರಿಯೊಂದಿಗೆ 48 ರನ್ ಗಳಿಸಿದ್ದರು. ಆ ಮೂಲಕ ದೊಡ್ಡ ಇನಿಂಗ್ಸ್ ಕಟ್ಟುತ್ತಾರೆಂದೇ ಎಲ್ಲರು ಭಾವಿಸಿದ್ದರು. ಆದರೆ, ಅವರನ್ನು ಅಶ್ವಿನ್ ಕ್ರೀಸ್ನಲ್ಲಿ ಉಳಿಯಲು ಬಿಡಲಿಲ್ಲ. ಕೇವಲ ಎರಡು ರನ್ಗಳಿಂದ ಅರ್ಧ ಶತಕ ವಂಚಿತರಾಗಿ ನಿರಾಸೆಯಿಂದ ಎಲ್ಗರ್ ಪೆವಿಲಿಯನ್ಗೆ ತೆರಳಿದರು.
ಇದೀಗ ಕ್ರೀಸ್ನಲ್ಲಿ ತೆಂಬಾ ಬವುಮಾ (2) ಹಾಗೂ ಕ್ವಿಂಟನ್ ಡಿ ಕಾಕ್ (1) ಬ್ಯಾಟಿಂಗ್ ಮುಂದುವರಿಸಲಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಭಾರತ
ಪ್ರಥಮ ಇನಿಂಗ್ಸ್: 601 (ಡಿ)
ದಕ್ಷಿಣ ಆಫ್ರಿಕಾ
ಪ್ರಥಮ ಇನಿಂಗ್ಸ್: 275
ದ್ವಿತೀಯ ಇನಿಂಗ್ಸ್: 27 ಓವರ್ ಗಳಲ್ಲಿ 74-4 (ಡೀನ್ ಎಲ್ಗರ್ 48; ಆರ್. ಅಶ್ವಿನ್ 8 ಕ್ಕೆ 2, ಇಶಾಂತ್ ಶಮರ್ಾ 17 ಕ್ಕೆ 1, ಉಮೇಶ್ ಯಾದವ್ 14 ಕ್ಕೆ 1)