ಲೋಕದರ್ಶನ ವರದಿ
ಕುಮಟಾ 22: ಇಂದು ಹೊಟೇಲ ತಿಂಡಿ ತಿನಿಸುಗಳು ದುಬಾರಿಯಾಗಿದ್ದು, ಹೊಟೇಲ ಉದ್ಯಮ ಲಾಭದಾಯಕವಾಗಿ ಬೆಳೆದಿದೆ. ಆದಾಗ್ಯೂ ಕಾಮರ್ಿಕರ ತೀವ್ರ ಸಂಕಷ್ಟ ಎದುರಿಸುತ್ತಿರುವ ಮುಂಬಯಿಯಂತಹ ಮಹಾನಗರಗಳಲ್ಲಿ ಹೆಸರಾಂತ ಹೊಟೇಲಗಳು ಹೇಳ ಹೆಸರಿಲ್ಲದೇ ಬಾಗಿಲು ಮುಚ್ಚಿಕೊಂಡಿವೆ. ಹೊಟೇಲಗಳಲ್ಲಿ ಪುರುಷ ಕಾಮರ್ಿಕರ ಸಮಸ್ಯೆಯಿಂದಾಗಿ ಆ ಸ್ಥಾನವನ್ನು ಮಹಿಳೆಯರು ತುಂಬಿದ್ದಾರೆ.
ಪ್ರವಾಸಿಗರಿಗೆ, ನೌಕರ ವರ್ಗದವರಿಗೆ, ಕಾಮರ್ಿಕರಿಗೂ ಹೊಟೇಲ ತಿಂಡಿ, ಊಟ ಅನಿವಾರ್ಯವಾಗಿದೆ. ಆದರೆ ಬಡ ಸಾಮಾನ್ಯ ವರ್ಗದವರಿಗೆ ಹೊಟೇಲ ತಿಂಡಿ, ತಿನಿಸು, ಊಟದ ದರಗಳು ಕೈಗೆಟುಕದಂತಾಗಿದೆ. ಇದನ್ನರಿತ ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಡವರಿಗೂ ಕಡಿಮೆ ಬೆಲೆಯಲ್ಲಿ ಆಹಾರ ಸಿಗಬೇಕೆಂಬ ಸದುದ್ದೇಶದಿಂದ ರಾಜ್ಯದ ಹಲವೆಡೆ ಇಂದಿರಾ ಕ್ಯಾಂಟೀನ ಆರಂಭಿಸಿದೆ. ಈ ಮಾದರಿಯಲ್ಲಿಯೇ ಕುಮಟಾದಲ್ಲಿರುವ ಶಾನಭಾಗ ಹೊಟೇಲ ಕಳೆದ ಇಪ್ಪತ್ತು ವರ್ಷಗಳಿಂದ ಬಡವನ ಹಸಿವು ನೀಗಿಸುವ ಹೊಟೇಲಾಗಿ ಎಲ್ಲರ ಮೆಚ್ಚುಗೆ ಗಳಿಸಿದೆ.
1995ರಲ್ಲಿ ಕುಮಟಾದ ಪಿಕ್-ಅಪ್ ಬಸ್ ಸ್ಟ್ಯಾಂಡ್ ಹೋಗುವ ದಾರಿಯ ಸನಿಹ ಎಡಗಡೆ ಒಂದು ಓಣಿ ಇದೆ. ಅಲ್ಲಿ ಶಾನಭಾಗ ಹೊಟೇಲ ಎಂಬ ಚಿಕ್ಕ ಬೋರ್ಡ ಕಾಣಸಿಗುತ್ತದೆ. ಒಳಗಡೆ ತಿಂಡಿ, ಊಟಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ರಾಮನಾಥ ಶಾನಭಾಗ ಹಾಗೂ ಸಹೋದರರಾದ ಕಾಶೀನಾಥ, ಸಿದ್ಧನಾಥ ಸೇರಿ ಈ ಹೊಟೇಲ ನಡೆಸುತ್ತಿದ್ದು, ಜನಸಾಮಾನ್ಯರಿಗೆ ಅತೀ ಕಡಿಮೆ ಬೆಲೆಯಲ್ಲಿ ತಿಂಡಿ ಊಟ ನೀಡುವ ಮೂಲಕ ತಮಗರಿವಲ್ಲದ ಜನಸೇವೆ ಸಲ್ಲಿಸುತ್ತಿದ್ದಾರೆ. ಮುಂಜಾನೆ 7 ಗಂಟೆಗೆ ಆರಂಭವಾಗುವ ಈ ಹೊಟೇಲನಲ್ಲಿ ಇಡ್ಲಿ ಸಾಂಬಾರ, ಪೂರಿಬಾಜಿ, ಬನ್ಸ ಬಾಜಿ, ಮಿಸಳಬಾಜಿ, ಶಿರಾ, ಮಸಾಲೆ ದೋಸೆ ಹೀಗೆ ಸಾಮಾನ್ಯವಾಗಿ ಎಲ್ಲ ತರಹದ ರುಚಿಕರ ತಿಂಡಿಗಳು ಲಭ್ಯವಿದೆ. ಎರಡು ಇಡ್ಲಿ ಸಾಂಬಾರ, ಚಟ್ನಿ, ಎರಡು ಬನ್ಸ ಬಾಜಿ, ಮಿಸಳಬಾಜಿ, ಶಿರಾ, ಮಸಾಲೆ ದೋಸೆ ಯಾವುದೇ ತಿಂಡಿ ತಿನಿಸಿಗೂ ಕೇವಲ 10 ರೂ. ಮಾತ್ರ. ಮುಂಜಾನೆ 7 ರಿಂದ 3 ಗಂಟೆಯವರೆಗೆ ಎಲ್ಲ ತಿಂಡಿ ಲಭ್ಯವಿದ್ದು, ಮಸಾಲೆ ದೋಸೆ ಸಂಜೆ 3 ರಿಂದ 8 ರವರೆಗೆ ನೀಡಲಾಗುತ್ತದೆ. ಪಟ್ಟಣದ ಬಹುತೇಕ ಅಕಡೆಯಲ್ಲಿ ಸಾಮಾನ್ಯವಾಗಿ ತರಕಾರಿ ಊಟಕ್ಕೆ 50 ರಿಂದ 80 ರವರೆಗೆ ದರವಿದೆ. ಆದರೆ ಇಲ್ಲಿ ನೀಡುವ ತರಕಾರಿ ಊಟಕ್ಕೆ ಕೇವಲ 25 ರೂ. ಹಾಗಂತ ಊಟ ಅನ್ನ, ಸಾಂಬಾರಗಾಗಿ ಮಾತ್ರ ಸೀಮಿತವಾಗಿಲ್ಲ. ಜೊತೆಗೆ ಬಿಸಿಬಿಸಿಯಾದ ರುಚಿಕರವಾದ ಪಲ್ಯ, ಸುಕ್ಕಾ, ಹಪ್ಪಳ, ಉಪ್ಪಿನಕಾಯಿಯನ್ನು ಒಳಗೊಂಡಿರುತ್ತದೆ. ಮತ್ತೆ ಅನ್ನ ಬೇಕಾದರೆ ಒಂದು ಪ್ಲೇಟಿಗೆ ಕೇವಲ 5 ರೂ. ಮಾತ್ರ ರುಚಿಕರವಾದ ಮಜ್ಜಿಗೆಗೆ ಕೇವಲ 2 ರೂ. ಮಾತ್ರ.
ಸಾರು-ಸುಕ್ಕಾ ರುಚಿಕರಕ್ಕೆ ಮಂಗಳವಾರ, ಬುಧವಾರ ಬೆಳ್ಳುಳ್ಳಿ, ಉಳ್ಳಾಗಡ್ಡೆ ಬಳಸಲಾಗುತ್ತದೆ. ಉಳಿದ ದಿನ ರುಚಿಕರ ಊಟಕ್ಕೆ ಹಿಂಗು ಬಳಸಲಾಗುತ್ತದೆ. ವಟಾಣೆ, ಅಳಸಂದೆ, ಬಾಳೆಕಾಯಿ, ಕ್ಯಾಬೀಜ ಹೀಗೆ ಒಂದೊಂದು ದಿನ ಒಂದೊಂದು ತರಕಾರಿ ಬಳಸಿ ಪಲ್ಯ, ಸುಕ್ಕಾ, ಸಾರು ತಯಾರಿಸಲಾಗುತ್ತದೆಯೆನ್ನುತ್ತಾರೆ ಹೊಟೇಲ ಮಾಲಕ ರಾಮನಾಥ ರಾಮಕೃಷ್ಣ ಶಾನಭಾಗ.