ಮಾ.31ರವರೆಗೆ ಎಲ್ಲವನ್ನೂ ಸಹಿಸಿಕೊಳ್ಳುವುದು ಅನಿವಾರ್ಯ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಮಾ.24, ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಸಾರ್ವಜನಿಕರು ಎಂಟು ದಿನ ಎಲ್ಲವನ್ನೂ ಸಹಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರಿನ ತಮ್ಮ ಧವಳಿಗಿರಿ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಯುಗಾದಿ ಹಬ್ಬವನ್ನು ಸರಳವಾಗಿ ತಮ್ಮ ಮನೆಯಲ್ಲೇ ಪೂಜೆ ಮಾಡುವ ಮೂಲಕ ಆಚರಿಸಬೇಕು. ಈ ಸಂದರ್ಭದಲ್ಲಿ ಯಾವುದೇ ಆಡಂಬರದ ಅಗತ್ಯವಿಲ್ಲ. ನಾವು ಕೂಡ ಅದೇ ರೀತಿ ಮಾಡಲು ತೀರ್ಮಾನಿಸಿದ್ದೇವೆ. ಅದಕ್ಕಾಗಿ ಮಾರುಕಟ್ಟೆಗಳಿಗೆ ಓಡಾಡುವುದನ್ನು ನಿಲ್ಲಿಸಬೇಕು ಹೋಟೆಲ್, ಕಿಚನ್‌ನಿಂದ ಮನೆಗೆ ಊಟವನ್ನು ತರಿಸಿಕೊಳ್ಳಬಹುದು. ಈ ಬಗ್ಗೆ  ಹೋಟೆಲ್‌ಗಳಿಗೆ ಸೂಚನೆ ನೀಡಲಾಗಿದೆ. ಇಂದಿರಾ ಕ್ಯಾಂಟಿನ್‌ನಲ್ಲಿ ಜನಸಂದಣಿ ಹೆಚ್ಚುವ ಭೀತಿಯಿಂದ ಅದನ್ನು  ತೆರೆಯದಿರಲು ತೀರ್ಮಾನಿಸಲಾಗಿದೆ. ಇದು ಅನಿವಾರ್ಯ. ಇಂದಿರಾ ಕ್ಯಾಂಟೀನ್ ತೆರೆದರೆ ಜನದಟ್ಟಣೆ ಉಂಟಾಗುತ್ತದೆ. ಆದ್ದರಿಂದ ಮುಚ್ಚುವುದು ಅನಿವಾರ್ಯ ಎಂದು ಸಮರ್ಥಿಸಿಕೊಂಡರು.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಾಲು, ದಿನಪತ್ರಿಕೆಗಳು, ಹಣ್ಣುಗಳು, ಔಷಧಿಗಳು, ದಿನನಿತ್ಯದ ವಸ್ತುಗಳನ್ನು ಖರೀದಿಸಲು ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಇಂತಹ ವಿಷಯಗಳಲ್ಲಿ ಅಡ್ಡಿಪಡಿಸದೇ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು. ರಾಜ್ಯದಲ್ಲಿ ಒಂದು ರೀತಿಯ ಕರ್ಫ್ಯೂ ವಾತಾವರಣ ವಿಧಿಸಲಾಗಿದೆ. ದ್ವಿಚಕ್ರ ವಾಹನ, ಕಾರು ಓಡಾಟ ಮಾಡಬಾರದು. ಇದನ್ನು ಮೀರಿದರೆ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ಮಾ.31ರವರೆಗೆ ಮನೆಯೊಳಗೆ ಇರಬೇಕು, ಹೊರಗೆ ಯಾರೂ ಬರಬಾರದು ಎಂದು ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಬಗ್ಗೆ ಮನವಿ ಮಾಡಿದ್ದಾರೆ. ಅಂತಾರಾಷ್ಟ್ರೀಯ, ದೇಶೀಯ ವಿಮಾನ ಹಾರಾಟವನ್ನು ನಿನ್ನೆಯಿಂದ ನಿಲ್ಲಿಸಲಾಗಿದೆ  ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ದೇಶ ಮತ್ತು ರಾಜ್ಯದ ಜನರ ಅರ್ಥಮಾಡಿಕೊಳ್ಳಬೇಕು. ಮನೆಗೆ ಬೇಕಾದ ಸಣ್ಣಪುಟ್ಟ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಬರಬೇಕೆ ಹೊರತು ಬೇರೆ ರೀತಿಯ ಓಡಾಟ ಮಾಡಬಾರದು. ನಿಯಮ ಉಲ್ಲಂಘಿಸಿ ಜನ ಬೀದಿಗೆ ಬಂದರೆ ಪೊಲೀಸರು ಕ್ರಮಕೈಗೊಳ್ಳುತ್ತಾರೆ. ಆಗ ತಮ್ಮನ್ನು ಮತ್ತು ಸರ್ಕಾರವನ್ನು ದೂಷಿಸಬಾರದು ಎಂದು ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.