ಕಾಶಿ ಜಗದ್ಗುರುಗಳಿಂದ ರಶಿಯಾ ದಂಪತಿಗಳಿಗೆ ಇಷ್ಟಲಿಂಗ ದೀಕ್ಷೆ

ವಾರಣಾಸಿ (ಉ.ಪ್ರ.) : ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ನಗರದ ಕಾಶಿ ಜ್ಞಾನ ಪೀಠದಲ್ಲಿ ರಶಿಯಾ ದೇಶದ ಮಾಸ್ಕೋ ನಗರದ ದಂಪತಿಗಳಿಗೆ ಶುಕ್ರವಾರ ಜರುಗಿದ ವಿಶೇಷ ಪೂಜಾ ಸಮಾರಂಭದಲ್ಲಿ  ಇಷ್ಟಲಿಂಗ ದೀಕ್ಷೆ ನೀಡಲಾಯಿತು.

     ಮಾಸ್ಕೋ ನಗರದ ಎಲಬು ಕೀಲು ತಜ್ಞ ವೈದ್ಯ ಡಾ. ದೀಮಾ ಹಾಗೂ ಮಾಹಿತಿ ತಂತ್ರಜ್ಞಾನ ತಜ್ಞೆ ಶ್ವೇತಾ ದಂಪತಿಗಳಿಗೆ ಕಾಶಿ ಜ್ಞಾನ ಪೀಠದ ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ವೀರಶೈವ ಧರ್ಮ ಪದ್ಧತಿಯಂತೆ  ಇಷ್ಟಲಿಂಗ ಧಾರಣೆ ಮಾಡಿ, ಶಿವಪಂಚಾಕ್ಷರಿ ಮಹಾಮಂತ್ರೋಪದೇಶ ಮಾಡಿ ವೀರಶೈವ ಧರ್ಮ ದೀಕ್ಷೆ ನೀಡಿದರು.

       ನಿತ್ಯವೂ ಇಷ್ಟಲಿಂಗ ಪೂಜೆ ಮಾಡುವ ವಿಧಾನ, ಇಷ್ಟಲಿಂಗ ಮುಖೇನ ನಡೆಸುವ ಧ್ಯಾನದ ಅನುಸಂಧಾನದಲ್ಲಿ ಶಿವಬೆಳಗನ್ನು ಕಾಣುವ ಬಗೆಯನ್ನು ತಿಳಿಸಿದ ಶ್ರೀ ಕಾಶಿ ಜಗದ್ಗುರುಗಳು, ಇಹದ ಬದುಕಿನ ಎಲ್ಲಾ ರೀತಿಯ ಅನಿಷ್ಟಗಳನ್ನು ನಿವಾರಣೆ ಮಾಡುವ ಶಕ್ತಿ ಇಷ್ಟಲಿಂಗ ಹೊಂದಿದೆ ಎಂದರು.

        ಮನುಷ್ಯ ಇಹಲೋಕದ ಪಯಣಕ್ಕೆ ವಿದಾಯ ಹೇಳಿದಾಗ ಯಾವುದೇ ಸಿರಿ, ಸಂಪತ್ತು, ಅಧಿಕಾರ, ಅಂತಸ್ತು ಯಾವುದೂ ಆತನೊಂದಿಗೆ ಹಿಂಬಾಲಿಸುವದಿಲ್ಲ. ಆದರೆ ಇಷ್ಟಲಿಂಗ ಮಾತ್ರ ಮನುಷ್ಯ ಇನ್ನಿಲ್ಲವಾದಾಗಲೂ ಹಿಂಬಾಲಿಸುತ್ತದೆ ಎಂದೂ ಶ್ರೀ ಕಾಶಿ ಪೀಠದ ಡಾ.ಚಂದ್ರಶೇಖರ ಜಗದ್ಗುರುಗಳು ಹೇಳಿದರು.

       ಇಷ್ಟಲಿಂಗ ಧಾರಣೆಯೊಂದಿಗೆ ವೀರಶೈವ ಧರ್ಮ ದೀಕ್ಷೆ ಪಡೆದ ರಶಿಯಾ ದಂಪತಿಗಳಿಗೆ ಶ್ರೀ ಕಾಶಿ ಜಗದ್ಗುರುಗಳು ಡಾ. ದೀಮಾ ಅವರಿಗೆ 'ಧಮರ್ೇಶ' ಎಂದೂ, ಶ್ವೇತಾ ಅವರಿಗೆ 'ಸವಿತಾ' ಎಂದು ಮರು ನಾಮಕರಣ ಮಾಡಿ  ಆಶೀರ್ವದಿಸಿದರು.