ಇರಾಕ್ ಗೆ ಅತ್ಯವಶ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ

ನವದೆಹಲಿ, ಜ 8 ಇರಾಕ್ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ತೀರಾ ಅಗತ್ಯವಲ್ಲದ ಪ್ರವಾಸಗಳನ್ನು ಕೈಗೊಳ್ಳದಂತೆ ಕೇಂದ್ರ ವಿದೇಶಾಂಗ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ. "ಇರಾಕ್ ನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು, ಮುಂದಿನ ಅಧಿಸೂಚನೆ ಹೊರಬೀಳುವವರೆಗೆ ಆ ದೇಶಕ್ಕೆ ಅತ್ಯವಶ್ಯವಲ್ಲದ ಪ್ರಯಾಣ ಕೈಗೊಳ್ಳಬಾರದು. ಇರಾಕ್ ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು ಎಚ್ಚರಿಕೆಯಿಂದಿರಬೇಕು ಮತ್ತು ದೇಶದೊಳಗೆ ಪ್ರಯಾಣ ಮಾಡುವುದನ್ನು ತಡೆಹಿಡಿಯಬೇಕು" ಎಂದು ಸಚಿವಾಲಯ ಸಲಹೆ ನೀಡಿದೆ. ಬಾಗ್ದಾದ್ ನಲ್ಲಿರುವ ನಮ್ಮ ರಾಯಭಾರಿ ಮತ್ತು ಎಬರ್ಿಲ್ ನ ನಮ್ಮ ದೂತವಾಸ ಕಚೇರಿ ಎಂದಿನಂತೆ ಕೆಲಸ ನಿರ್ವಹಿಸಲಿದ್ದು, ಭಾರತೀಯರಿಗೆ ಅಗತ್ಯ ನೆರವು ಒದಗಿಸಲಿದೆ ಎಂದು ಹೇಳಿಕೆ ತಿಳಿಸಿದೆ. ಈ ನಡುವೆ, ಇರಾಕ್ ನ ಸೇನಾ ಕಮಾಂಡರ್ ಮೇಜರ್ ಜನರಲ್ ಕಾಸೇಮ್ ಸೊಲೈಮನಿ ಅವರ ಹತ್ಯೆಗೆ ಪ್ರತಿಕಾರವಾಗಿ ಸೇನಾ ಪಡೆ, ಅಮೆರಿಕದ ಭದ್ರತಾ ಪಡೆಗಳಿರುವ ಎರಡು ಇರಾಕಿ ತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ 80 ಅಮೆರಿಕ ಯೋಧರು ಮೃತಪಟ್ಟಿದ್ದಾರೆ ಎನ್ನಲಾಗಿದೆ.