ಹಾವೇರಿ 11: ಇಂದು ನಮ್ಮ ದಿನನಿತ್ಯದ ಜೀವನದಲ್ಲಿ ಇಂಟರ್ನೆಟ್ ಬಳಕೆ ಹಾಸುಹೊಕ್ಕಾಗಿದೆ, ಇಂಟರ್ನೆಟ್ ಬಳಕೆ ಹೆಚ್ಚಾದಂತೆ, ಅಷ್ಟೇ ಪ್ರಮಾಣದಲ್ಲಿ ಸೈಬರ ಅಪರಾಧಗಳು ನಡೆಯುತ್ತಿದೆ. ಹಾಗಾಗಿ ಅತ್ಯಂತ ಜಾಗರೂಕತೆಯಿಂದ ಇಂಟರ್ನೆಟ್ ಬಳಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ವಿಶ್ವ ಸುರಕ್ಷಿತ ಅಂತರ್ಜಾಲ ದಿನ ಅಂಗವಾಗಿ ಆಯೋಜಿಸಲಾದ ಜೊತೆಯಾಗಿ ಉತ್ತಮ ಇಂಟರ್ನೆಟ್ ಕಡೆಗೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೈಬರ ಅಪರಾಧ ತಡೆಗೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡರು ಸಹ ಪ್ರತಿದಿನ ಸೈಬರ ಅಪರಾಧಗಳು ನಡೆಯುತ್ತಿರುವುದು ವಿಷಾಧಕರ ಸಂಗತಿಯಾಗಿದೆ ಎಂದರು.
ಇಂಟರ್ನೆಟ್ ಇಲ್ಲದೆ ಜೀವನ ಇಲ್ಲದಂತಾಗಿದೆ. ಈಗ ಶೇ.95 ರಷ್ಟು ಹಣಕಾಸು ವ್ಯವಹಾರ ಆನ್ಲೈನ್ ಮೂಲಕ ಆಗುತ್ತದೆ. ಸೈಬರ ಅಪರಾಧಗಳು ಆನ್ಲೈನ್ ಹಣ ವರ್ಗಾವಣೆಯಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಸಣ್ಣ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವುದು ಹೆಚ್ಚಾಗಿ ಕಂಡುಬರುತ್ತಿದ್ದು, ಮಕ್ಕಳು ಕುತೂಹಲದಿಂದ ಯಾವುದೇ ಸಂದೇಶ ಕ್ಲಿಕ್ ಮಾಡಿದರೆ, ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಸೊರಿಕೆಯಾಗುವ ಸಾಧ್ಯತೆ ಇರುತ್ತದೆ ಎಂದರು.
ಇಂಟರ್ನೆಟ್ ಬಳಕೆ ಸೂಕ್ಷ್ಮತೆ ತಿಳಿದುಕೊಳ್ಳಿ: ಈ ಡಿಜಿಟಲ್ ಯುಗದಲ್ಲಿ ಒಂದು ಕ್ಲಿಕ್ ಮೂಲಕ ಅವಕಾಶ ಹಾಗೂ ಅಪಾಯದ ಬಾಗಿಲು ತೆರೆಯಬಹುದು. ಹಾಗಾಗಿ ಇಂಟರ್ನೆಟ್ ಬಳಕೆ ಸೂಕ್ಷ್ಮತೆಗಳನ್ನು ತಿಳಿದುಕೊಳ್ಳಬೇಕು. ಈ ಕುರಿತು ನಿಮ್ಮ ಕುಟುಂಬ ಹಾಗೂ ನಿಮ್ಮ ನೆರೆಹೊರೆಯವರಿಗೆ ಅರಿವು ಮೂಡಿಸಬೇಕು. ಅಪರಿಚಿತ ವ್ಯಕ್ತಿಗಳ ಸಂದೇಶ, ಕರೆಗಳನ್ನು ಸ್ವೀಕರಿಸಬಾರದು. ಆ್ಯಪ್ ಬಳಕೆಮಾಡುವಾಗ ಅಸಲಿ ಹಾಗೂ ನಕಲಿ ಆ್ಯಪ್ಗಳ ಬಗ್ಗೆ ಪರೀಶೀಲನೆ ಮಾಡಬೇಕು. ನಿಮಗೆ ತಿಳಿಯದ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬಾರದು ಹಾಗೂ ವೈಯಕ್ತಿಕ ಮಾಹಿತಿ ನೀಡಬಾರದು ಎಂದು ಸಲಹೆ ನೀಡಿದರು.
ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ: ಎನ್.ಐ.ಸಿ. ಅಧಿಕಾರಿ ಹೆಗಡೆ ಮಾತನಾಡಿ, ಇಂದು ಖಾಸಗಿ ಹಾಗೂ ಸರ್ಕಾರಿ ಸೇವೆಯಲ್ಲಿ ಇಂಟರ್ನೆಟ್ ಸೇವೆ ಅವಶ್ಯವಾಗಿದೆ. ಸರ್ಕಾರಿ ಸೇವೆ, ಬ್ಯಾಂಕಿಗ್ ವ್ಯವಹಾರ, ಬಸ್, ರೈಲು ಹಾಗೂ ವಿಮಾನ ಟಿಕೇಟ್ಗಳನ್ನು ಕುಳಿತಲ್ಲೆ ಕಾಯ್ದಿರಿಸಬಹುದು. ಇಷ್ಟೆಲ್ಲ ಉಪಯೋಗವಿರುವ ಇಂಟರ್ನೆಟ್ನಿಂದ ಅಷ್ಟೇ ಅಪಾಯವಿದೆ. ಸ್ಕ್ಯಾಮರ್ಗಳು ಮೊಬೈಲ್ಗೆ ಕರೆಮಾಡಿ, ಬ್ಯಾಂಕಿನವರಂತೆ ಮಾತನಾಡಿ, ನಿಮ್ಮ ಬ್ಯಾಂಕ್ ವಿವರ ಅಥವಾ ಪಾಸ್ವರ್ಡ್ ಅಥವಾ ಒಟಿಪಿ ಕೇಳುತ್ತಾರೆ, ಒಂದು ವೇಳೆ ನೀವು ನೀಡಿದರೆ ನಿಮ್ಮ ಖಾತೆಯಲ್ಲಿರುವ ಹಣ ಕ್ಷಣದಲ್ಲಿ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಇದನ್ನೆ ಫಿಶಿಂಗ್ ಎನ್ನುತ್ತಾರೆ ಎಂದರು.
ನಕಲಿ ಆ್ಯಪ್ಗಳ ಬಗ್ಗೆ ಎಚ್ಚರಿಕೆ ಇರಲಿ: ವಾಟ್ಸಾಪ್, ಇನ್ಸ್ಟ್ರಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ಸುಳ್ಳು ಜಾಹೀರಾತು ನೀಡುವ ಮೂಲಕ ಸಾರ್ವಜನಿಕರ ಖಾತೆಯಲ್ಲಿರುವ ಹಣ ವರ್ಗಾವಣೆ ಮಾಡಲಾಗುತ್ತಿದೆ. ನಕಲಿ ಆ್ಯಪ್ಗಳ ಮೂಲಕ ಸೈಬರ್ ಕ್ರೈಮಗಳು ಹೆಚ್ಚಾಗಿ ನಡೆಯುತ್ತಿದ್ದು, ಸಾರ್ವಜನಿಕರು ನಕಲಿ ಆ್ಯಪ್ಗಳ ಬಗ್ಗೆ ಎಚ್ಚರವಾಗಿರಬೇಕು. ತಮ್ಮ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂದು ತಿಳಿದ ತಕ್ಷಣವೇ ಬ್ಯಾಂಕ್ ಶಾಖೆಗೆ ತೆರಳಿ, ಆ ಖಾತೆಯ ಹಣ ವರ್ಗಾವಣೆ ತಡೆಹಿಡಿಯಬೇಕು ಎಂದು ಸಲಹೆ ನೀಡಿದರು.
ಡಿಜಿಟಲ್ ಅರೆಸ್ಟ್ ಇರುವುದಿಲ್ಲ: ದೆಹಲಿ ಸಿಐಡಿ, ಸಿಒಡಿ, ಸಿಬಿಐ ಇಡಿ ಅಥವಾ ಕಸ್ಟಮ್ಸ್ನಿಂದ ಕರೆ ಮಾಡುತ್ತಿರುವುದಾಗಿ ಹೇಳಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕಾನೂನು ಬಾಹಿರ ಹಣ ವರ್ಗಾವಣೆಯಾಗಿದೆ, ಹಾಗಾಗಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತೇವೆಂದು ಹೆದರಿಸಿ ನಿಮ್ಮಿಂದ ಹಣ ಪಡೆಯುವ ಪ್ರಯತ್ನ ಮಾಡುತ್ತಾರೆ. ಕಾನೂನಿನಲ್ಲಿ ಯಾರೇ ಪೊಲೀಸರು ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ. ಈ ಕುರಿತು ಕಾನೂನಿನ ಅರಿವು ಇರಬೇಕು. ಇಮೇಲ್, ಫೇಸ್ಬುಕ್ ಮತ್ತು ಇನ್ಸಾ-್ಟ ಗ್ರಾಂ ಖಾತೆಗಳಿಗೆ ಸುಲಭ ಪಾಸ್ವರ್ಡ್ ಇಡಬಾರದು. ಬದಲಾಗಿ ವಿಶಿಷ್ಟ ಚಿಹ್ನೆ, ಸಂಖ್ಯೆ ಅಕ್ಷರಗಳು ಇರುವ ಕಠಿಣ ಪಾಸ್ವರ್ಡ್ ಹಾಕಬೇಕು. ಒಂದು ವೇಳೆ ಸೈಬರ್ ಅಪರಾಧ ವಂಚನೆಗೆ ಒಳಗಾದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಬೇಕು ಅಥವಾ 1930ಕ್ಕೆ ಕರೆ ಮಾಡಬೇಕು ಎಂದು ಹೇಳಿದರು.
ಆನ್ಲೈನ್ ಶ್ಯಾಪಿಂಗ್, ಉದ್ಯೋಗ ಹುಡುಕಾಟ, ಶಿಕ್ಷಣ, ತರಬೇತಿ ನೋಂದಣಿ ಎಲ್ಲವೂ ಇಂಟರ್ನೆಟ್ ಮೂಲಕ ಮಾಡಲಾಗುತ್ತಿದೆ. ಯಾವುದೇ ಸೇವೆ ಪಡೆಯುವ ಮೊದಲು ಆ ಸಂಸ್ಥೆ ಬಗ್ಗೆ ಸರಿಯಾಗಿ ತಿಳಿದುಕೊಂಡು ವ್ಯವಹಾರ ಮಾಡಬೇಕು. ಸೈಬರ್ ಅಪರಾಧಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧ ವಿಭಾಗ ತೆರೆಯಲಾಗಿದೆ. ಪ್ರತಿಯೊಬ್ಬ ಇಂಟರ್ನೆಟ್ ಬಳಕೆದಾರರ ಇಂಟರ್ನೆಟ್ ಸಾಧಕ ಬಾಧಕಗಳನ್ನು ತಿಳಿದುಕೊಂಡು ವ್ಯವಹಾರ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ, ತಹಶೀಲ್ದಾರ ಶರಣ್ಣಮ್ಮ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.