ಬೆಂಗಳೂರು, ಏ.3,ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳಿಗೂ ಕೂಡಲೇ ಜಾಹೀರಾತು ಬಿಡುಗಡೆ ಮಾಡುವಂತೆ ವಾರ್ತಾ ಇಲಾಖೆಗೆ ಸೂಚಿಸಿದ್ದಾರೆ. ಕೆಯುಡಬ್ಲ್ಯೂಜೆ ಮನವಿ ಬಗ್ಗೆ ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಗಮನ ಸೆಳೆದ ಡಿಸಿಎಂ ಡಾ.ಅಶ್ವಥ್ ನಾರಾಯಣ್ , ಪತ್ರಿಕೆಗಳನ್ನು ನಡೆಸುವುದು ಕಷ್ಟವಿದೆ. ಈ ಕಷ್ಟದ ಹೊತ್ತಿನಲ್ಲಿ ಕರೊನಾ ಜಾಗೃತಿ ಸೇರಿದಂತೆ ಸರ್ಕಾರದ ಜಾಹೀರಾತು ಕೊಡುವಂತೆ ಆದೇಶಿಸಿದರು.ಸ್ಥಳದಲ್ಲಿಯೇ ಇದ್ದ ವಾರ್ತಾ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಅವರು ವಾರ್ತಾ ಇಲಾಖೆಯ ಆಯುಕ್ತ ಸಿದ್ದರಾಮಪ್ಪ ಅವರಿಗೆ ಜಾಹೀರಾತು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.ಪತ್ರಕರ್ತರನ್ನು ಕೇಂದ್ರ ಸರ್ಕಾರದ ವಿಮಾ ಯೋಜನೆ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಸಂಘ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ದ ಉಪಮುಖ್ಯಮಂತ್ರಿ ಡಾಅಶ್ವಥ್ ನಾರಾಯಣ ಅವರು ರಾಜ್ಯ ಸರ್ಕಾರದಿಂದಲೂ ಈ ಬಗ್ಗೆ ಶಿಫಾರಸ್ಸು ಮಾಡುವ ಭರವಸೆಯನ್ನು ನೀಡಿದರು.