ಚೆಕ್ ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆ ಕಠಿಣ ಗೊಳಿಸಿ: ಡಿಸಿ

ಹಾವೇರಿ:ಎ. 17 ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ   ಜಿಲ್ಲೆಯ ಗಡಿಭಾಗಗಳಲ್ಲಿ ಸ್ಥಾಪಿಸಲಾಗಿರುವ ಚೆಕ್ಪೋಸ್ಟ್ಗಳಲ್ಲಿ ವಾಹನಗಳಲ್ಲಿ ಸಂಚರಿಸಲು ಅನುಮತಿ ನೀಡಿದಕ್ಕಿಂತೆ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಸಂಚರಿಸದಂತೆ  ಎಚ್ಚರವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೃಷ್ಣ ಬಾಜಪೇಯಿ ಅವರು ಆದೇಶ ಹೊರಡಿಸಿದ್ದಾರೆ.

ಬೇರೆ ಜಿಲ್ಲೆಗಳಿಂದ ಅತ್ಯವಶ್ಯಕ ವಸ್ತುಗಳನ್ನು ಸಾಗಿಸುವ ಲಾರಿಗಳಲ್ಲಿ ಚಾಲಕ ಮತ್ತು ಕ್ಲೀನರ್ ಸೇರಿ ಮೂರು ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ. ಅತ್ಯಾವಶ್ಯಕ ವಸ್ತುಗಳ ಸಾಗಿಸುವ ಲಘು ವಾಹನಗಳಲ್ಲಿ ಚಾಲಕರೊಂದಿಗೆ ಓರ್ವರು ಸೇರಿದಂತೆ ಎರಡು ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ. ನಾಲ್ಕು ಚಕ್ರಗಳ ಖಾಸಗಿ ವಾಹನಗಳಲ್ಲಿ ಎರಡು ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ, ದ್ವಿಚಕ್ರ ವಾಹನಗಳಲ್ಲಿ ಚಾಲಕನಿಗೆ (ಓರ್ವ) ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯ ಗಡಿ ಭಾಗಗಳಲ್ಲಿ  ಬೇರೆ ಜಿಲ್ಲೆಗಳಿಂದ ಅತ್ಯಾವಶ್ಯಕ ವಸ್ತುಗಳನ್ನು ಸಾಗಿಸುವ ವಾಹನಗಳು, ನಾಲ್ಕು ಚಕ್ರಗಳ ಖಾಸಗಿ ಹಾಗೂ ದ್ವಿಚಕ್ರ ವಾಹನಗಳಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅಧಿಕೃತ  ಪಾಸ್ ಪಡೆದುಕೊಂಡು ಹಾವೇರಿ ಜಿಲ್ಲೆಯೊಳಗೆ ಪ್ರವೇಶಮಾಡುವ ಸಂದರ್ಭದಲ್ಲಿ ಚೆಕ್ಪೋಸ್ಟ್ಗಳಲ್ಲಿ ವಾಹನಗಳನ್ನು ಒಳಗೆ ಬಿಡುವ ಮುನ್ನ ಕಡ್ಡಾಯವಾಗಿ ಪಾಸ್ಗಳನ್ನು ಪರಿಶೀಲನೆ ನಡೆಸಬೇಕು. ಪ್ರಯಾಣಿಕರ ಸಂಖ್ಯೆಯನ್ನು ಪರಿಶೀಲಿಸಬೇಕು. ಪ್ರಯಾಣಿಸುವವರ ವಿವರ ಮತ್ತು ಕಾರಣಗಳ ಬಗ್ಗೆ ಪರಿಶೀಲನೆ ನಡೆಸಬೇಕು. ನಿಯಮ ಮೀರಿ ಗಡಿಯೊಳಗೆ ವಾಹನಗಳನ್ನು ಬಿಟ್ಟರೆ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಜಿಲ್ಲೆಯ ಹಾವೇರಿ, ರಾಣೇಬೆನ್ನೂರು, ರಟ್ಟೀಹಳ್ಳಿ, ಹಿರೇಕೆರೂರು, ಶಿಗ್ಗಾಂವ, ಸವಣೂರು ಹಾಗೂ ಹಾನಗಲ್ ತಾಲೂಕುಗಳ ಗಡಿಭಾಗದಲ್ಲಿ 12 ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ದಿನದ 24 ತಾಸು ಕಾರ್ಯನಿರ್ವಹಿಸುವ ಈ ಚೆಕ್ಪೋಸ್ಟ್ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಟ್ಟೆಚ್ಚರವಹಿಸಲಾಗಿದೆ ಎಂದು ತಿಳಿಸಿದ್ದಾರೆ