ಪಾದರಾಯನಪುರದಲ್ಲಿ ಇಂದಿನಿಂದ ಮೊಬೈಲ್ ವ್ಯಾನ್ ಮೂಲಕ ಜನರ ತಪಾಸಣೆ

ಬೆಂಗಳೂರು, ಮೇ 11,ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳನ್ನು ಹೊಂದಿರುವ ಪಾದರಾಯನಪುರದಲ್ಲಿ ಇಂದಿನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ತಪಾಸಣೆ ನಡೆಸುವ ಸಮಗ್ರ ಯೋಜನೆ ಆರಂಭಿಸಿದೆ. ಈ ಹಿಂದೆ ಪಾದರಾಯನಪುರದಲ್ಲಿ ರ್‍ಯಾಂಡಮ್ ಪರೀಕ್ಷೆ ನಡೆಸಲಾಗಿತ್ತು. ಈ ಸಮಯದಲ್ಲಿ ಓರ್ವ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ದಿನದಿಂದ ದಿನಕ್ಕೆ ಈ ವಲಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ತಪಾಸಣಾ ಕ್ರಮವನ್ನು ವಿಸ್ತರಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ಮೊಬೈಲ್ ವ್ಯಾನ್ ಮೂಲಕ ಸುಮಾರು 40 ಸಾವಿರ ಮಂದಿಯನ್ನು ಪರೀಕ್ಷೆ  ಮಾಡುವ ಯೋಜನೆಯನ್ನು ಸೋಮವಾರದಿಂದ ಆರಂಭಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಪಾದರಾಯನಪುರದ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತುಮಕೂರಿನ 45 ವರ್ಷದ ವ್ಯಕ್ತಿಯಲ್ಲಿಯೂ ಸೋಂಕು ಕಾಣಿಸಿಕೊಂಡಿದೆ. ಅವರು ಮೇ 5ರಂದು ತುಮಕೂರಿಗೆ ತೆರಳಿದ್ದರು. ಪಾದರಾಯನಪುರದಲ್ಲಿ ಒಟ್ಟು 45 ಪ್ರಕರಣಗಳು ವರದಿಯಾಗಿದ್ದು, ದೆಹಲಿ ಪ್ರಯಾಣದ ಇತಿಹಾಸ ಹೊಂದಿದ್ದ ಮೂವರಿಂದಲೇ ಸೋಂಕು ಹರಡಿದೆ. ಇಲ್ಲಿಯವರೆಗೆ ಬೆಂಗಳೂರು ನಗರದಲ್ಲಿ ಒಟ್ಟು 177 ಜನರಿಗೆ ಸೋಂಕು ತಗಲಿದ್ದು, 86 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 83 ಸಕ್ರಿಯ ಪ್ರಕರಣಗಳಿವೆ. ಜೊತೆಗೆ, ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ.