ಬೆಂಗಳೂರು, ಜೂ.4,ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಕಲ್ಯಾಣ ಮಂಟಪಗಳಲ್ಲಿ ದುಡಿಯುವ ಅಸಂಘಟಿತ ವಲಯದ ಕಾರ್ಮಿಕರಿಗೆ ರಾಜ್ಯ ಸರ್ಕಾರದ ತುರ್ತು ಪರಿಹಾರ ನೀಡಬೇಕೆಂದು ಕಲ್ಯಾಣ ಮಂಟಪ ದಿನಗೂಲಿಗಾರರ ಸಂಘದ ಅಧ್ಯಕ್ಷ ಶೇಕ್ ಮಸ್ತಾನ್ ಅಲಿ ಆಗ್ರಹಿಸಿದ್ದಾರೆ.ನಗರದಲ್ಲಿಂದು ಕಲ್ಯಾಣ ಮಂಟಪ ದಿನಗೂಲಿಗಾರರಿಗೆ ಹಣ್ಣು ಮತ್ತು ತರಕಾರಿ ವಿತರಿಸಿ ಅವರು ಮಾತನಾಡಿದರು.ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಅಧಿಕ ಕಲ್ಯಾಣ ಮಂಟಪಗಳಿದ್ದು, ಇದರಲ್ಲಿ ಸಾವಿರಾರರು ಕಾರ್ಮಿಕರು ಕೆಲಸ ಮಾಡುತ್ತಾರೆ. ಆದರೆ, ಲಾಕ್‌ಡೌನ್ ಪರಿಣಾಮದಿಂದಾಗಿ ಕಾರ್ಮಿಕರು ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಇವರಿಗೆ ರಾಜ್ಯ ಸರಕಾರವೇ ನೆರವು ನೀಡಬೇಕು. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಕೋವಿಡ್-19 ಸಂಬಂಧ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಕಲ್ಯಾಣ ಮಂಟಪಗಳಲ್ಲಿ ಚಟುವಟಿಕೆಗಳನ್ನು ನಡೆಸಲು ರಾಜ್ಯ ಸರಕಾರ ಅನುಮತಿ ನೀಡಬೇಕು. ಇಲ್ಲದಿದ್ದಲ್ಲಿ, ಸಣ್ಣಪುಟ್ಟ ಮೊತ್ತಕ್ಕಾಗಿ ದುಡಿಯುವ ಕಾರ್ಮಿಕರಿಗೆ ತೀವ್ರ ಸಂಕಷ್ಟದ ಪರಿಸ್ಥಿತಿ ಬರಲಿದೆ ಎಂದು ಅವರು ಹೇಳಿದರು.ಸದ್ಬವನ ಯೂತ್ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಕೆ.ಸಾದಿಕ್ ಪಾಷಾ ಮಾತನಾಡಿ, ಒಂದು ಕಲ್ಯಾಣ ಮಂಟದಲ್ಲಿ ಮದುವೆ ಸೇರಿದಂತೆ ಇನ್ನಿತರೆ ಕಾರ್ಯ ಕ್ರಮಗಳು ನಡೆದರೆ, 200ಕ್ಕೂ ಅಧಿಕ ಹೆಚ್ಚು ದಿನಗೂಲಿಗಾರರಿಗೆ ಕೆಲಸ ದೊರೆಯುತ್ತದೆ.ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ತುರ್ತು ನಿರ್ಧಾರ ಪ್ರಕಟಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಅಮ್ಜದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.