ಶಿವಮೊಗ್ಗ, ಫೆ.13, ಇನ್ನೋವೇಷನ್ ಪ್ರಾಧಿಕಾರ ಸ್ಥಾಪನೆ ಕುರಿತು ಸುಗ್ರೀವಾಜ್ಞೆ ಹೊರಡಿಸಲಾಗಿದ್ದು, ಮುಂದಿನ ಅಧಿವೇಶನದಲ್ಲಿ ಈ ಸಂಬಂಧದ ವಿಧೇಯಕ ಮಂಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಶಿವಮೊಗ್ಗ ಪ್ರವಾಸ ದಲ್ಲಿರುವ ಡಾ.ಅಶ್ವತ್ಥನಾರಾಯಣ ಗುರುವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. "ಇನ್ನೋವೇಶನ್ ಪ್ರಾಧಿಕಾರದ ಮೂಲಕ ಸಂಶೋಧನೆಗೆ ಎದುರಾಗುವ ಕಾನೂನಾತ್ಮಕ ಅಡ್ಡಿಗಳನ್ನು ನಿವಾರಿಸಿ, ಅನ್ವೇಷಣೆಗೆ ಎಲ್ಲ ಅಗತ್ಯ ನೆರವು ಒದಗಿಸಲಾಗುವುದು. ಮುಖ್ಯವಾಗಿ ಸಂಶೋಧನೆ ಕೈಗೊಳ್ಳುವವರಿಗೆ ಅವರ ಸಂಶೋಧನೆ ಅವಧಿಯಲ್ಲಿ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ," ಎಂದು ಅವರು ವಿವರಿಸಿದರು. "ಸಂಶೋಧನೆಗಳು ಕೇವಲ ವಿಶ್ವವಿದ್ಯಾಲಯಗಳಿಗೆ ಸೀಮಿತವಾಗದೇ, ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕು. ಹೀಗಾಗದಿದ್ದರೆ ಅದು ಜನರನ್ನು ತಲುಪಲು ಸಾಧ್ಯವಿಲ್ಲ. ಯಾವುದೇ ಸಂಶೋಧನೆಗೆ ಪೇಟೆಂಟ್ ಪಡೆಯಲು ಸರ್ಕಾರ ಆರ್ಥಿಕ ನೆರವು ಒದಗಿಸುತ್ತಿದೆ,"ಎಂದರು.
ಶಿಕ್ಷಣ ಗುಣಮಟ್ಟಕ್ಕೆ ಆದ್ಯತೆ "ಗುಣಮಟ್ಟದ ಶಿಕ್ಷಣ ನಮ್ಮ ಸರ್ಕಾರದ ಆದ್ಯತೆ, ಅದಕ್ಕಾಗಿ ಉದ್ಯಮಗಳ ಬೇಡಿಕೆಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು,"ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಾ. ಅಶ್ವತ್ಥನಾರಾಯಣ ತಿಳಿಸಿದರು. "ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಧ್ಯಾಪಕರಿಗೆ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ಧಾರವಾಡದಲ್ಲಿ ಈಗಾಗಲೇ ತರಬೇತಿ ಸಂಸ್ಥೆ ಇದ್ದು, ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ರೀತಿ ಮತ್ತಷ್ಟು ಸಂಸ್ಥೆಗಳನ್ನು ಸ್ಥಾಪಿಸುವ ಉದ್ದೇಶ ನಮ್ಮ ಸರ್ಕಾರಕ್ಕೆ ಇದೆ. ಹೊಸ ಕಲಿಕಾ ವಿಧಾನ ಹಾಗೂ ಕೌಶಲ ಸುಧಾರಣೆಗೆ ಇದರಿಂದ ನೆರವಾಗುವುದು,"ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
ಶಿವಮೊಗ್ಗದ ಜತೆ ಅವಿನಾಭಾವ ನಂಟು: ನನ್ನ ಹೈಸ್ಕೂಲ್ ಹಾಗೂ ಪದವಿ ಪೂರ್ವ ಶಿಕ್ಷಣ ಆಗಿದ್ದು ಇಲ್ಲೇ. ಶಿವಮೊಗ್ಗಕ್ಕೆ ಭೇಟಿ ನೀಡುವುದೇ ನನಗೊಂದು ರೀತಿಯ ಖುಷಿ. ನನ್ನ ತಂದೆ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರಣ ಶಿವಮೊಗ್ಗದ ನಂಟು ಬೆಳೆಯಿತು. ಹಲವಾರು ಮಾದರಿ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ಇಲ್ಲಿ ಪಡೆದ ಶಿಕ್ಷಣವೂ ಕಾರಣ ಎಂದು ಹೇಳಿದರು. ರಾಜ್ಯ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಹಾಗೂ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.