ಬೆಂಗಳೂರು, ಏ.6,ಇಂದಿರಾ ಕ್ಯಾಂಟೀನ್ ನಲ್ಲಿ ನೀಡುತ್ತಿದ್ದ ತಿಂಡಿ, ಊಟ ನಿಲ್ಲಿಸಿರುವ ವಿಷಯದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಮೂಲಕ ಇಂದು ಮಾತುಕತೆ ನಡೆಸಿದರು.ಊಟ, ತಿಂಡಿ ನಿಲ್ಲಿಸಿರುವ ಕುರಿತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ದೂರವಾಣಿ ಕರೆ ಮಾಡಿ, ಊಟ, ತಿಂಡಿ ಉಚಿತವಾಗಿ ನೀಡಲಾಗುತ್ತಿತ್ತು. ಆದರೆ ದುರುಪಯೋಗವಾದ ಕಾರಣ ದರ ನಿಗದಿ ಮಾಡಿರುವುದಾಗಿ ತಿಳಿಸಿದರು.
ದುರುಪಯೋಗವಾಗದಂತೆ ಊಟ, ತಿಂಡಿಯನ್ನು ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಉಚಿತವಾಗಿ ನೀಡಿ. ದುರುಪಯೋಗಕ್ಕೆ ಅವಕಾಶ ಮಾಡಿಕೊಡುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಸಿದ್ದರಾಮಯ್ಯ ಅವರು ಹೇಳಿದರು. ಈ ಕುರಿತು ಪರಿಶೀಲನೆ ನಡೆಸುವುದಾಗಿ ಯಡಿಯೂರಪ್ಪ ಅವರು ಮಾತುಕತೆ ವೇಳೆ ಸಿದ್ದರಾಮಯ್ಯ ಅವರಿಗೆ ತಿಳಿಸಿದರು. ಲಾಕ್ ಡೌನ್ ನಿಂದ ರೈತರು, ಕೃಷಿ ಕೂಲಿ ಕಾರ್ಮಿಕರು, ಜತೆಗೆ ಹಲವಾರು ಕ್ಷೇತ್ರಗಳ ದುಡಿಯುವ ವರ್ಗದವರಿಗೆ ತೊಂದರೆಯಾಗಿದೆ. ಅವರ ನೆರವಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಒತ್ತಾಯಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಯವರು, ಪ್ರತಿಪಕ್ಷಗಳ ಸಲಹೆ, ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.