ಮೊದಲ ಗೆಲುವಿನ ವಿಶ್ವಾಸದಲ್ಲಿ ಭಾರತ ಫುಟ್ಬಾಲ್ ತಂಡ

ಕೊಲ್ಕತಾ, ಅ 14:     ಏಷ್ಯನ್ ಚಾಂಪಿಯನ್ಸ್ ಕತಾರ್ ವಿರುದ್ಧ ಗಮನಾರ್ಹ ಪ್ರದರ್ಶನ ತೋರಿದ ವಿಶ್ವಾಸದಲ್ಲಿರುವ ಭಾರತ ಫುಟ್ಬಾಲ್ ತಂಡ ನಾಳೆ ನಡೆಯುವ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕೆಳ ಶ್ರೇಯಾಂಕದ ಬಾಂಗ್ಲಾದೇಶ ವಿರುದ್ಧ ಸೆಣಸಲು ಸಿದ್ದವಾಗಿದೆ.  ಉಭಯ ತಂಡಗಳ ಈ ಕಾದಾಟಕ್ಕೆ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ. ಕಳೆದ ತಿಂಗಳ ದೋಹಾದಲ್ಲಿ ಕತಾರ್ ವಿರುದ್ಧ ಭಾರತ ಗೋಲು ರಹಿತವಾಗಿ ಪಂದ್ಯ ಡ್ರಾ ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ನೂತನ ಮುಖ್ಯ ಕೋಚ್ ಸ್ಟಿಮ್ಯಾಕ್ ಇಗೋರ್ ಅವರು ಹೊಸ ಮುಖಗಳನ್ನು ಪರಿಚಯ ಮಾಡಿಕೊಟ್ಟಿದ್ದರು. ಇದು ಅಂದಿನ ಪಂದ್ಯಕ್ಕೆ ಪ್ರಮುಖ ತಿರುವಾಗಿತ್ತು. ಗಾಯದಿಂದಾಗಿ ನಿಯಮಿತ ನಾಯಕ ಸುನೀಲ್ ಚೆಟ್ರಿ ಅವರು ಅಂದಿನ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಗೋಲ್ಕೀಪರ್ ಗುರುಕೀರತ್ ಸಿಂಗ್ ಸಂಧು ಅವರು ತಂಡವನ್ನು ಮುನ್ನಡೆಸಿದ್ದರು. ಗುರುಕೀರತ್ ಅಂದಿನ ಪಂದ್ಯದಲ್ಲಿ ಅದ್ಭುತವಾಗಿ ಗೋಲ್ ಕೀಪರ್ ಸೇವೆ ಮಾಡಿದ್ದರು. ಎರಡನೇ ಅವಧಿಯಲ್ಲಿ ಗೋಲು ಗಳಿಸಬಹುದಾದ ಹಲವು ಅವಕಾಶಗಳಿಗೆ ಕಡಿವಾಣ ಹಾಕಿ ಪಂದ್ಯ ಡ್ರಾ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗುವಾಹಟಿಯಲ್ಲಿ ನಡೆದಿದ್ದ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ತಂಡ ಒಮನ್ ವಿರುದ್ಧ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು. ಇದರೊಂದಿಗೆ ಐದು ತಂಡಗಳನ್ನೊಳಗೊಂಡಿರುವ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿದೆ.   ಮೊದಲ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಅಫ್ಘಾನಿಸ್ತಾನ ಹಾಗೂ ಕತಾರ್ ವಿರುದ್ಧ ಸೋಲು ಅನುಭವಿಸಿತ್ತು. ಗಾಯದಿಂದಾಗಿ ರಕ್ಷಣಾತ್ಮಕ ಆಟಗಾರ ಸಂದೇಶ್ ಜಿಂಗಾ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಅ. 9 ರಂದು ನಾರ್ಥ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. 2011ರ ಬಳಿಕ ಇದೇ ಮೊದಲ ಬಾರಿ ಈ ಮೈದಾನದಲ್ಲಿ ಭಾರತ ಆಡುತ್ತಿದೆ.