ಮೆಲ್ಬೋರ್ನ್, ಫೆ 27 ; ಶಫಾಲಿ ವರ್ಮಾ(46 ರನ್) ಅವರ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಕಿವೀಸ್ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಎಡವಿದ ಭಾರತ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆ 134 ರನ್ ಗುರಿ ನೀಡಿದೆ.
ಇಲ್ಲಿನ, ಜಂಕ್ಷನ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ನ್ಯೂಜಿಲೆಂಡ್ ನಾಯಕಿ ಸೋಫಿಯಾ ಡಿವೈನ್ ನಿರ್ಧಾರವನ್ನು ತಂಡದ ಬೌಲಿಂಗ್ ವಿಭಾಗ ಸಮರ್ಥಿಸಿಕೊಂಡಿತು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ನಿಗದಿತ 20 ಓವರ್‌ಗಳಿಗೆ ಎಂಟು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು. ಆ ಮೂಲಕ ನ್ಯೂಜಿಲೆಂಡ್‌ಗೆ 134 ರನ್ ಸಾಧಾರಣ ಗುರಿ ನೀಡಿತು.
ಪ್ರಸ್ತುತ ಟೂರ್ನಿಯಲ್ಲಿ ಅದ್ಭುತ ಲಯದಲ್ಲಿರುವ ಶಫಾಲಿ ವರ್ಮಾ ಅವರು ನಿರೀಕ್ಷೆಯಂತೆ ಅದ್ಭುತ ಬ್ಯಾಟಿಂಗ್ ಮಾಡಿದರು. ಆರಂಭದಿಂದಲೇ ಅಬ್ಬರಿಸಿದ ವರ್ಮಾ, ನ್ಯೂಜಿಲೆಂಡ್ ಮೇಲೆ ಒತ್ತಡ ಹೇರಿದ್ದರು. ಎರಡು ಜೀವದಾನ ಪಡೆದ ಶಫಾಲಿ, ಸ್ಫೋಟಕ ಬ್ಯಾಟಿಂಗ್‌ಗೆ ಮೊರೆ ಹೋದರು. ಕೇವಲ 34 ಎಸೆತಗಳಿಗೆ ಮೂರು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಯೊಂದಿಗೆ 46 ರನ್ ಚಚ್ಚಿದರು. ಅರ್ಧಶತಕದಂಚಿನಲ್ಲಿ ಅಮೇಲಿಯಾ ಕೆರ್‌ಗೆ ವಿಕೆಟ್ ಒಪ್ಪಿಸಿದರು.
ಆರಂಭಿಕ ಆಟಗಾರ್ತಿ ಸ್ಮೃತಿ ಮಾಂಧನ 11 ರನ್ ಗಳಿಸಿ ತಹುಹಾಗೆ ವಿಕೆಟ್ ಒಪ್ಪಿಸಿದರು. ತಾನಿಯಾ ಭಾಟಿಯಾ ಅವರು 23 ರನ್ ಗಳಿಸಿ ವಿಕೆಟ್ ಕೊಟ್ಟರೆ, ಜೆಮಿಮಾ ರೊಡ್ರಿಗಸ್ 10 ರನ್‌ಗಳಿಗೆ ಸೀಮಿತರಾದರು. ನಾಯಕಿ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ವೈಫಲ್ಯ ಮುಂದುವರಿಯಿತು.
ದೀಪ್ತಿ ಶರ್ಮಾ ಹಾಗೂ ವೇದಾ ಕೃಷ್ಣಮೂರ್ತಿ ಕೂಡ ಕಿವೀಸ್ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು. ಕೊನೆಯಲ್ಲಿ ಕೊಂಚ ಪ್ರತಿರೋಧ ತೋರಿದ ಶಿಖಾ ಪಾಂಡೆ ಹಾಗೂ ರಾಧ ಯಾದವ್ ಅವರು ಕ್ರಮವಾಗಿ 10 ಮತ್ತು 14 ರನ್ ಗಳಿಸಿದರು.
ನ್ಯೂಜಿಲೆಂಡ್ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ರೋಸ್ಮೇರಿ ಮೈರ್ ಮತ್ತು ಅಮೇಲಿಯಾ ಕೆರ್ ತಲಾ ಎರಡು ವಿಕೆಟ್ ಪಡೆದರು. ಲೀ ತಹುಹಾ, ಸೋಫಿಯಾ ಡಿವೈನ್ ಮತ್ತು ಲೆಹ್ ಕಸ್ಪ್ರೆಕ್ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ: 20 ಓವರ್‌ಗಳಿಗೆ 133/8 (ಶಫಾಲಿ ವರ್ಮಾ 46, ತಾನಿಯಾ ಭಾಟಿಯಾ 23; ರೋಸ್ಮೇರಿ ಮೈರ್ 27 ಕ್ಕೆ 2, ಅಮೇಲಿಯಾ ಕೆರ್ 21 ಕ್ಕೆ 2)