ಕ್ರೈಸ್ಟ್ ಚರ್ಚ್, ಜ 24 : ಜಾರ್ಜ್ ವಾರ್ಕರ್ (135 ರನ್) ಶತಕ ಹಾಗೂ ಕೊಲ್ ಮೆಕ್ ಕಾಂಚಿ (56 ರನ್) ಅರ್ಧಶತಕದ ಬಲದಿಂದ ನ್ಯೂಜಿಲೆಂಡ್ ಎ ತಂಡ ಎರಡನೇ ಅನಧೀಕೃತ ಏಕದಿನ ಪಂದ್ಯದಲ್ಲಿ ಭಾರತ ಎ ವಿರುದ್ಧ 29 ರನ್ ಗಳಿಂದ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಎ ತಂಡ ನಿಗದಿತ 50 ಓವರ್ ಗಳಿಗೆ 7 ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ಭಾರತ ಎ ತಂಡ ನಿಗದಿತ 50 ಓವರ್ ಗಳಿಗೆ 9 ವಿಕೆಟ್ ಕಳೆದುಕೊಂಡು 266 ರನ್ ಗಳಿಗೆ ಶಕ್ತವಾಯಿತು. ಆತಿಥೇಯರು ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಸಮಬಲ ಸಾಧಿಸಿತು.
296 ರನ್ ಗುರಿ ಬೆನ್ನತ್ತಿದ್ದ ಭಾರತ ಎ ತಂಡ ಆರಂಭ ಉತ್ತಮವಾಗಿರಲಿಲ್ಲ. ಕಳೆದ ಪಂದ್ಯದಲ್ಲಿ ಮಿಂಚಿದ್ದ ಪೃಥ್ವಿ ಶಾ (2) ಬೇಗ ವಿಕೆಟ್ ಒಪ್ಪಿಸಿದರು. ಮಯಾಂಕ್ ಅಗರ್ವಾಲ್ 37 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶಾನ್ 55 ಎಸೆತಗಳಲ್ಲಿ 44 ರನ್ ಗಳಿಸಿದ್ದಾಗ ರನೌಟ್ ಬಲೆಗೆ ಬಿದ್ದರು. ನಂತರ, 41 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ವಿಜಯ್ ಶಂಕರ್ ಕೂಡ ಔಟ್ ಆದರು.
ಒಂದು ತುದಿಯಲ್ಲಿ ನಿಂತು ಕೊನೆಯವರೆಗೂ ಹೋರಾಟ ನಡೆಸಿದ ಕೃನಾಲ್ ಪಾಂಡ್ಯ ತಂಡದ ಗೆಲುವಿನ ಆಸೆಯನ್ನು ಉಳಿಸಿಕೊಂಡಿದ್ದರು. ಅದರಂತೆ ಅವರು, 48 ಎಸೆತಗಳಲ್ಲಿ 51 ರನ್ ಗಳಿಸಿದ್ದರು. 48ನೇ ಓವರ್ ನಲ್ಲಿ ಜಾಕೋಬ್ ದುಫಿಗೆ ವಿಕೆಟ್ ಒಪ್ಪಿಸಿದರು. ಇವರು ಔಟ್ ಆಗುತ್ತಿದ್ದಂತೆ ಭಾರತದ ಗೆಲುವಿನ ಕನಸು ಭಗ್ನವಾಯಿತು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ ಎ ಪರ ಆರಂಭಿಕ ಜಾರ್ಜ್ ವಾರ್ಕರ್ ಅದ್ಭುತ ಪ್ರದರ್ಶನ ತೋರಿದ್ದರು. ಭಾರತದ ಬೌಲರ್ ಗಳನ್ನು ನುಚ್ಚು ನೂರು ಮಾಡಿದ್ದರು. 144 ಎಸೆತಗಳಲ್ಲಿ 135 ರನ್ ಗಳಿಸಿ ಶತಕ ಸಿಡಿಸಿ ಸಂಭ್ರಮಿಸಿದರು. ಇವರ ಅಮೋಘ ಇನಿಂಗ್ಸ್ ನಲ್ಲಿ ಆರು ಸಿಕ್ಸರ್ ಹಾಗೂ 12 ಬೌಂಡರಿಗಳಿದ್ದವು.
ಕೊನೆಯಲ್ಲಿ ಮಿಂಚಿನ ಬ್ಯಾಟಿಂಗ್ ಮಾಡಿದ್ದ ಕೊಲ್ ಮೆಕ್ ಕಾಂಚಿ 54 ಎಸೆತಗಳಲ್ಲಿ 56 ರನ್ ಬಾರಿಸಿದ್ದರು. ಭಾರತ ಎ ಪರ ಇಶಾನ್ ಪೊರೆಲ್ ಮೂರು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ ಎ: 50 ಓವರ್ ಗಳಿಗೆ 295/7 (ಜಾರ್ಜ್ ವಾರ್ಕರ್ 135, ಕೊಲ್ ಮೆಕ್ ಕಾಂಚಿ 56; ಇಶಾನ್ ಪೊರೆಲ್ 50 ಕ್ಕೆ 3, ಮೊಹಮ್ಮದ್ ಸಿರಾಜ್ 73 ಕ್ಕೆ 2)
ಭಾರತ ಎ : 50 ಓವರ್ ಗಳಿಗೆ 266/9 (ಕೃನಾಲ್ ಪಾಂಡ್ಯ 51, ಇಶಾನ್ ಕಿಶಾನ್ 44, ವಿಜಯ್ ಶಂಕರ್ 41; ಜೇಮ್ಸ್ ನಿಶ್ಯಾಮ್ 24 ಕ್ಕೆ 2, ಜಾಕೋಬ್ 35 ಕ್ಕೆ 2)