ಮಂಧಾನ-ಶಫಾಲಿ ಭರ್ಜರಿ ಬ್ಯಾಟಿಂಗ್: ವನಿತೆಯರಿಗೆ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಜಯ

ಮೆಲ್ಬೋರ್ನ್, ಫೆ 8, ಸ್ಮೃತಿ ಮಂಧಾನ (55 ರನ್) ಹಾಗೂ ಶಫಾಲಿ ವರ್ಮಾ(49 ರನ್) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ, ಟಿ-20 ಮಹಿಳಾ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು.ಇಲ್ಲಿನ ಜಂಕ್ಷನ್ ಓವಲ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ನೀಡಿದ್ದ 174 ರನ್ ಗುರಿ ಹಿಂಬಾಲಿಸಿದ ಭಾರತಕ್ಕೆ ಆರಂಭಿಕರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಜೋಡಿ ಮೊದಲನೇ ವಿಕೆಟ್‌ಗೆ 85 ರನ್ ಗಳಿಸಿ ಭರ್ಜರಿ ಆರಂಭ ನೀಡಿತ್ತು.

ಸ್ಪೋಟಕ ಬ್ಯಾಟಿಂಗ್ ಮಾಡಿದ ಶಫಾಲಿ ವರ್ಮಾ 28 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಎಂಟು ಬೌಂಡರಿಯೊಂದಿಗೆ 49 ರನ್ ಗಳಿಸಿದ್ದರು. ಆದರೆ, ಎಲಿಸ್ ಪೆರ್ರಿ ಅವರಿಗೆ ವಿಕೆಟ್ ಒಪ್ಪಿಸುವ ಮೂಲಕ ಕೇವಲ ಒಂದು ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿದ ಜೆಮಿಮಾ ರೊಡ್ರಿಗಸ್ ಕೇವಲ 19 ಎಸೆತಗಳಲ್ಲಿ 30 ರನ್ ಚಚ್ಚಿ ಔಟಾದರು.ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಕೇವಲ 48 ಎಸೆತಗಳಲ್ಲಿ ಏಳು ಬೌಂಡರಿಯೊಂದಿಗೆ 55 ರನ್ ಗಳಿಸಿದರು. ಇವರ ಅರ್ಧಶತಕದ ನೆರವಿನಿಂದ ಭಾರತ ತಂಡ ಗೆಲುವಿನ ಸಮೀಪ ತಲುಪಲು ಸಾಧ್ಯವಾಯಿತು. 

ಕೊನೆಯಲ್ಲಿ ನಾಯಕಿ ಹರ್ಮನ್‌ಪ್ರಿತ್ ಕೌರ್ (29 ರನ್) ಹಾಗೂ ದೀಪ್ತಿ ಶರ್ಮಾ(11 ರನ್) ತಂಡವನ್ನು ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಸೇರಿಸಿದರು. ಪಂದ್ಯದ ಗೆಲುವಿನೊಂದಿಗೆ ಭಾರತ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಸೋತಿರುವ ಆಸ್ಟ್ರೇಲಿಯಾ ತಂಡಕ್ಕೆ ಇಂಗ್ಲೆಂಡ್ ವಿರುದ್ಧದ ಪಂದ್ಯ ಮಾಡು ಇಲ್ಲವೆ ಮಡಿ ಪರಿಸ್ಥಿತಿ ಉಂಟಾಗಿದೆ.ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡದ ಪರ ಆ್ಯಶ್ಲೆ ಗಾರ್ಡನರ್ 57 ಎಸೆತಗಳಲ್ಲಿ 93 ರನ್  ಚಚ್ಚಿದ್ದರು. ಮೆಗ್ ಲ್ಯಾನಿಂಗ್ 37 ರನ್  ಗಳಿಸಿದ್ದರು.  ಇವರ ಎದುರು ಭಾರತ ತಂಡದ ಬೌಲಿಂಗ್ ವಿಭಾಗ ದುಬಾರಿಯಾಗಿತ್ತು. ಭಾರತದ ಪರ ದೀಪ್ತಿ ಶರ್ಮಾ ಎರಡು ವಿಕೆಟ್ ಪಡೆದಿದ್ದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ (ಮ): 20 ಓವರ್‌ಗಳಿಗೆ 173/5 (ಆ್ಯಶ್ಲೆ ಗಾರ್ಡನರ್ 93, ಮೆಗ್ ಲ್ಯಾನಿಂಗ್ 37; ದೀಪ್ತಿ ಶರ್ಮಾ 27 ಕ್ಕೆ 2, ಹರ್ಲಿನ್ ಡಿಯೊಲ್ 21 ಕ್ಕೆ 1)

ಭಾರತ (ಮ): 19.4 ಓವರ್‌ಗಳಿಗೆ 177/3 (ಸ್ಮೃತಿ ಮಂಧಾನ 55, ಶಫಾಲಿ ವರ್ಮಾ 49, ಜೆಮಿಮಾ ರೊಡ್ರಿಗಸ್ 30; ಮೆಗನ್ ಸ್ಕಟ್ 26 ಕ್ಕೆ 1, ನಿಕೋಲಾ ಕ್ಯಾರಿ 27 ಕ್ಕೆ 1)