ಇಂದೋರ್, ಜ 6 ಗುವಾಹಟಿ ಬಸ್ರಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲನೇ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಬೇಸರಕ್ಕೆ ಒಳಗಾಗಿರುವ ಭಾರತ ಹಾಗೂ ಶ್ರೀಲಂಕಾ ತಂಡಗಳು ನಾಳೆ ಇಲ್ಲಿನ ಹೋಲ್ಕರ್ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯವಾಡಲು ಸಜ್ಜಾಗಿವೆ.
ಭಾನುವಾರದ ಆರಂಭಿಕ ಪಂದ್ಯ ಟಾಸ್ ಆದ ಬಳಿಕ ಮಳೆಯಾಗಿದ್ದರಿಂದ ಅಂಗಳ ಸಂಪೂರ್ಣ ಒದ್ದೆಯಾಗಿತ್ತು. ಜತೆಗೆ, ಪಿಚ್ ಕೂಡ ತೇವವಾಗಿತ್ತು. ಸುದೀರ್ಘ ಮೂರು ಗಂಟೆಗಳ ಕಾಲ ಕಾದು ನೋಡಿದ ಬಳಿಕ ಒಂದೂ ಎಸೆತ ಕಾಣದೆ ಪಂದ್ಯ ಮಳೆಗೆ ಆಹುತಿಯಾಯಿತು.
ಪಿಚ್ ಮೇಲೆ ಹಾಕಿದ್ದ ಪ್ಲಾಸ್ಟಿಕ್ ಕವರ್ ಗಳಲ್ಲಿ ಸಣ್ಣ ರಂಧ್ರ ಇದ್ದ ಕಾರಣ ಪಿಚ್ ಕೂಡ ಹಲವು ಕಡೆ ತೇವಾಗಿತ್ತು. ತೇವ ಕಡಿಮೆ ಮಾಡಲು ಹೇರ್ ಡ್ರೈಯರ್ಸ್ ಕ್ರೀಡಾಂಗಣದ ಸಿಬ್ಬಂದಿ ಬಳಸಿದ್ದರು. ಸಾಕಷ್ಟು ಹರ ಸಾಹಸ ಮಾಡಿದರೂ ಒಂದೂ ಎಸೆತ ಕಾಣದೆ ಪಂದ್ಯ ರದ್ದಾಗಿದ್ದರಿಂದ ಹಾಜರಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಯಿತು.
ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ಸರಣಿಗಳನ್ನು ಯಶಸ್ವಿಯಾಗಿ ಮುಗಿಸಿರುವ ಭಾರತ ತಂಡ ಲಘು ವಿರಾಮ ಪಡೆದು ಇದೀಗ ಶ್ರೀಲಂಕಾ ವಿರುದ್ಧದ ಚುಟುಕು ಸರಣಿಗೆ ಸಜ್ಜಾಗಿದೆ. ಈಗಾಗಲೇ ಮೊದಲನೇ ಪಂದ್ಯ ಮಳೆಗೆ ಆಹುತಿಯಾಗಿದ್ದು, ಇನ್ನುಳಿದ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶ ಪಡಿಸಿಕೊಳ್ಳುವ ಯೋಜನೆಯನ್ನು ಕೊಹ್ಲಿ ಪಡೆ ಹಾಕಿ ಕೊಂಡಿದೆ.
ಗಾಯದಿಂದಾಗಿ ದೀರ್ಘ ಸಮಯ ವಿಶ್ರಾಂತಿ ಪಡೆದ ಬಳಿಕ ಟೀಮ್ ಇಂಡಿಯಾಗೆ ಮರಳಿರುವ ಜಸ್ಪ್ರಿತ್ ಬುಮ್ರಾ ಅವರ ಮೇಲೆ ಟೀಮ್ ಮ್ಯಾನೇಜ್ ಮೆಂಟ್ ಹಾಗೂ ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಕಳೆದ ವರ್ಷ ಜುಲೈ-ಆಗಸ್ಟ್ ನಲ್ಲಿ ಕೆರಿಬಿಯನ್ ಪ್ರವಾಸದ ಬಳಿಕ ಬ್ಯಾಕ್ ಸ್ಟ್ರೆಸ್ ಫ್ರ್ಯಾಕ್ಚರ್ ಗೆ ಒಳಗಾಗಿದ್ದ ಬುಮ್ರಾ, ಅಂದಿನಿಂದ ತಂಡದಿಂದ ಹೊರಗುಳಿದಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಅವರು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಬುಮ್ರಾ ಜತೆಗೆ, ಮೊಣಕಾಲು ಗಾಯದಿಂದ ಚೇತರಿಸಿಕೊಂಡು ಮರಳಿರುವ ಎಡಗೈ ಆರಂಭಿಕ ಶಿಖರ್ ಧವನ್ ಅವರ ಪಾಲಿಗೂ ಈ ಸರಣಿ ಅತ್ಯಂಯ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.
ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯ ವೇಳೆ ಧವನ್ ಮೊಣಕಾಲಿಗೆ ಗಾಯವಾಗಿತ್ತು. ಹಾಗಾಗಿ, ಅವರು ಕಳೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದರು. ಇದಕ್ಕೂ ಮುನ್ನ ಬಾಂಗ್ಲಾದೇಶದ ವಿರುದ್ಧ ಧವನ್ ಕಳಪೆ ಪ್ರದರ್ಶನ ತೋರಿ ಎಲ್ಲರ ಟೀಕೆಗೆ ಗುರಿಯಾಗಿದ್ದರು. ಆದಾಗ್ಯ, ಶಿಖರ್ ಧವನ್ ರಣಜಿ ಟ್ರೋಫಿ ಪಂದ್ಯದಲ್ಲಿ ಇತ್ತೀಚೆಗೆ ಶತಕ ಬಾರಿಸಿದ್ದರು.
ಇನ್ನೂ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ, ದೀಪಕ್ ಚಾಹರ್ ಹಾಗೂ ಭುವನೇಶ್ವರ್ ಕುಮಾರ್ ಅವರ ಅನುಪಸ್ಥಿಯಲ್ಲಿ ಬುಮ್ರಾ ಅವರೊಂದಿಗೆ ಡೆತ್ ಓವರ್ ಗಳಲ್ಲಿ ನವದೀಪ್ ಸೈನಿ ಹಾಗೂ ಶಾದರ್ೂಲ್ ಠಾಕೂರ್ ಹೇಗೆ ನಿರ್ವಹಣೆ ಮಾಡಲಿದ್ದಾರೆಂದು ಟೀಮ್ ಮ್ಯಾನೇಜ್ ಮೆಂಟ್ ಗಮನಿಸಲಿದೆ.
ಇದೇ ವರ್ಷ ಅಕ್ಟೋಬರ್ ನಲ್ಲಿ ಜರುಗುವ ಟಿ-20 ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ತುಡಿತದಲ್ಲಿರುವ ವಾಷಿಂಗ್ಟನ್ ಸುಂದರ್ ಅವರಿಗೆ ನಾಳಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಹಾದಿಯಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ಸಂಪೂರ್ಣ ಚೇತರಿಸಿಕೊಂಡಿರುವ ವೇಳೆಯೇ ಶಿವಂ ದುಬೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಸತತ ಆರು ಪಂದ್ಯಗಳಲ್ಲಿ ಬೆಂಚ್ ಕಾಯುತ್ತಿರುವ ಕೇರಳ ಸಂಜು ಸ್ಯಾಮ್ಸನ್ ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹಾಗಾಗಿ, ರಿಷಭ್ ಪಂತ್ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಿರ್ವಹಣೆ ತೋರಬೇಕು.
ಮತ್ತೊಂದೆಡ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟಿ-20 ಪಂದ್ಯವಾಡಿದ್ದ ಏಂಜೆಲೊ ಮ್ಯಾಥ್ಯೂಸ್ ಅವರು ದೀರ್ಘ ಅವಧಿ ಬಳಿಕ ಶ್ರೀಲಂಕಾ ಚುಟುಕು ತಂಡಕ್ಕೆ ಮರಳಿದ್ದಾರೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವತ್ತ ಅವರು ಗಮನ ಹರಿಸಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಕಳೆದ ಟಿ-20 ಸರಣಿಯಲ್ಲಿ ಶ್ರೀಲಂಕಾ ಸಂಘಟಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಹಾಗಾಗಿ, ಆಸೀಸ್ ವಿರುದ್ಧ 0-3 ಅಂತರದಲ್ಲಿ ಸರಣಿ ವೈಟ್ ವಾಷ್ ಅನುಭವಿಸಿತ್ತು.
ಇದುವರೆಗೂ ಭಾರತ ಹಾಗೂ ಶ್ರೀಲಂಕಾ ತಂಡಗಳು 17 ಬಾರಿ ಟಿ-20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈಗಾಗಲೇ ಮೊದಲನೇ ಪಂದ್ಯ ಮಳೆಗೆ ಬಲಿಯಾಗಿದ್ದು, ಇನ್ನುಳಿದ ಎರಡೂ ಪಂದ್ಯಗಳಲ್ಲಿ ಉಭಯ ತಂಡಗಳಿಗೆ ಸತತ ಎರಡರಲ್ಲೂ ಗೆದ್ದರೆ ಮಾತ್ರ ಸರಣಿ ಇಲ್ಲವಾದಲ್ಲಿ ಡ್ರಾನಲ್ಲಿ ಸರಣಿ ಮುಗಿಯಲಿದೆ. ಕ್ರಿಕೆಟ್ ಇತಿಹಾಸದಲ್ಲೇ ಶ್ರೀಲಂಕಾ ತಂಡ ದ್ವಿಪಕ್ಷೀಯ ಟಿ-20 ಸರಣಿಯಲ್ಲಿ ಭಾರತ ವಿರುದ್ಧ ಗೆಲುವು ಸಾಧಿಸಿಯೇ ಇಲ್ಲ.
ತಂಡಗಳು
ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿ.ಕೀ), ರವೀಂದ್ರ ಜಡೇಜಾ, ಶಿವಮ್ ದುಬೆ, ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ನವದೀಪ್ ಸೈನಿ, ಶಾದರ್ೂಲ್ ಠಾಕೂರ್, ಮನೀಷ್ ಪಾಂಡೆ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್.
ಶ್ರೀಲಂಕಾ: ಲಸಿತ್ ಮಲಿಂಗಾ(ನಾಯಕ), ಧನುಷ್ಕ ಗುಣತಿಲಕ, ಆವಿಷ್ಕಾ ಫೆನರ್ಾಂಡೊ, ಏಂಜೆಲೊ ಮ್ಯಾಥ್ಯೂಸ್, ದಸೂನ್ ಶನಕ, ಕುಸಾಲ್ ಪೆರೆರಾ, ನಿರೋಶನ್ ಡಿಕ್ವೆಲ್, ಧನಂಜಯ್ ಡಿ ಸಿಲ್ವಾ, ಇಸುರು ಉದನ, ಭನುಕ ರಾಜಪಕ್ಸ, ಒಶಾದ ಫೆನರ್ಾಂಡೊ, ವನಿಂದು ಹಸರಂಗ, ಲಹಿರು ಕುಮಾರ, ಕುಸಾಲ್ ಮೆಂಡಿಸ್, ಲಕ್ಷಣ್ ಸಂಡಕನ್, ಕಸೂನ್ ರಜಿತಾ
ಸಮಯ: ನಾಳೆ ಸಂಜೆ 07:00
ಸ್ಥಳ: ಹೋಲ್ಕರ್ ಕ್ರೀಡಾಂಗಣ, ಇಂದೋರ್