ಅಗರ್ತಲಾ, ಅ 26: ಭಾರತ - ಬಾಂಗ್ಲಾ ಗಡಿ ರಕ್ಷಣಾ ಯೋಧರು ದೀಪಾವಳಿಯ ಶುಭಾಶಯ ವಿನಿಮಯ ಮತ್ತು ಸಿಹಿ ಹಂಚಿಕೊಂಡು ಸಂಭ್ರಮ ಪಟ್ಟಿದ್ದಾರೆ. ದೀಪಾವಳಿಗೆ ಎರಡು ದಿನ ಮುನ್ನವೇ ಶುಕ್ರವಾರ ರಾತ್ರಿ ಭಾರತ - ಬಾಂಗ್ಲಾ ಗಡಿ ರಕ್ಷಣಾ ಯೋಧರು, ಅಖೌರಾ ಚೆಕ್ ಪೋಸ್ಟ್ ಬಳಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ದೀಪಾವಳಿ ಆಚರಣೆ ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ವೃದ್ಧಿಸಲಿದೆ ಮತ್ತು ಗಡಿ ಭಾಗದಲ್ಲಿನ ಹಿಂಸಾಚಾರವನ್ನು ತಗ್ಗಿಸಿ ಭಾರತ - ಬಾಂಗ್ಲಾ ಜನರು ಸಹೋದರರಂತೆ ಬಾಳುವ ಉತ್ತಮ ವಾತಾವರಣಕ್ಕೆ ನಾಂದಿ ಹಾಡಲಿದೆ ಎಂದು ಬಾಂಗ್ಲಾದ ಕಮಾಂಡರ್ ಜಹಂಗೀರ್ ಆಲಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.