ನವದೆಹಲಿ,
ಮಾ 28 ದೇಶದಲ್ಲಿ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ
ಬೆನ್ನಲ್ಲೇ ಭಾರತ ಈ ಸಾಂಕ್ರಾಮಿಕ ಕಾಯಿಲೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು
ಕೇಂದ್ರ ಸರ್ಕಾರ ತಿಳಿಸಿದೆ. ಕೋವಿಡ್ -19 ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ
ಎಂಬ ಟೀಕೆಗಳಿಗೆ ಉತ್ತರಿಸಿದ ಮಾಹಿತಿ ಮತ್ತು ಪ್ರಸರಣ ಸಚಿವಾಲಯ, ಕೊರೋನಾ ವೈರಸ್ ಅನ್ನು
ಸಾಂಕ್ರಾಮಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸುವ ಮುನ್ನವೇ ಸರ್ಕಾರ ಸಮಗ್ರ
ವ್ಯವಸ್ಥೆಯನ್ನು ಕೈಗೊಂಡಿತ್ತು. ವಿದೇಶದಿಂದ ಆಗಮಿಸುವವರ ತಪಾಸಣೆ, ವೀಸಾ ಮತ್ತು
ಅಂತಾರಾಷ್ಟ್ರೀಯ ವಿಮಾನಗಳ ರದ್ದತಿಯನ್ನು ಕೂಡ ಇತರ ದೇಶಗಳಿಗಿಂತ ಮೊದಲೇ
ಕೈಗೊಳ್ಳಲಾಗಿತ್ತು ಎಂದಿದ್ದಾರೆ. ಕೆಲ ಪ್ರಭಾವಿ ವ್ಯಕ್ತಿಗಳಿಗೆ ತಪಾಸಣೆ ನಡೆಸದೆ
ಒಳಬರಲು ಅವಕಾಶ ಕಲ್ಪಿಸಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಸಚಿವಾಲಯ, ಯಾವುದೇ
ವ್ಯಕ್ತಿಗೆ ತಪಾಸಣೆಯಿಂದ ವಿನಾಯಿತಿ ನೀಡಲಾಗಿಲ್ಲ. ಶಂಕಿತರನ್ನು ಪ್ರತ್ಯೇಕವಾಗಿರಿಸಿ
ತಪಾಸಣೆ ನಡೆಸಲಾಗಿದೆ. ಇದು ವ್ಯವಹಾರ ನಿಮಿತ್ತ, ಪ್ರವಾಸ ವಿದೇಶಕ್ಕೆ ಹೋದವರು,
ವಿದ್ಯಾರ್ಥಿಗಳು ಮತ್ತು ವಿದೇಶಿಗರನ್ನು ಒಳಗೊಂಡಿದೆ. ಭಾರತದಲ್ಲಿ ಮೊದಲ ಕೊರೋನಾ
ಪ್ರಕರಣ ಪತ್ತೆಯಾಗುವ ಮೊದಲೇ ಭಾರತ ಚೀನಾ ಹಾಗೂ ಹಾಂಗ್ ಕಾಂಗ್ ನಿಂದ ಆಗಮಿಸುವ
ಪ್ರವಾಸಿಗರನ್ನು ತಪಾಸಣೆ ಆರಂಭಿಸಲಾಗಿತ್ತು ಎಂದಿದೆ.