ನೆಲಮೂಲ ಸಂಸ್ಕೃತಿಯ ಬಗ್ಗೆ ಅಭಿಮಾನವಿರಲಿ: ಲೂತಿ
ಬೀಳಗಿ 15: ಭಾರತ ಸರ್ವ ಜನಾಂಗದ ಶಾಂತಿಯ ತೋಟ, ಅನೇಕ ಜಾತಿ, ಮತ ಪಂಥಗಳ ಸಮನ್ವಯತೆಯ ಬೀಡು. ಇಲ್ಲಿ ಹಲವು ಹಬ್ಬ ಹರಿದಿನಗಳನ್ನು ಆಚರಿಸಿಕೊಂಡು ಬಂದಿದ್ದರೂ ನಮ್ಮದು ಜನಪದ ಸಂಸ್ಕೃತಿಯ ನಾಡಾದ್ದರಿಂದ ನೆಲಮೂಲ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಅಭಿಮಾನವಿರಲೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುರಾಜ ಲೂತಿ ಹೇಳಿದರು.
ತಾಲೂಕಿನ ಬೂದಿಹಾಳ್ ಎಸ್. ಎ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಸಂಕ್ರಾಂತಿ ನಮ್ಮ ಸಂಸ್ಕೃತಿಯ ಪ್ರತೀಕ. ಭೂ ದೇವಿಯ ಉಪಕಾರವನ್ನು ಸ್ಮರಿಸಿಕೊಳ್ಳುವುದರ ಜೊತೆಗೆ ಒಬ್ಬರಿಗೊಬ್ಬರು ಎಳ್ಳು ಬೆಲ್ಲ ಕೊಟ್ಟು ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಬದುಕನ್ನು ಸಾಗಿಸುವ ಹಬ್ಬವಾಗಿದೆ. ಪಾಶ್ಚತ್ಯ ಸಂಸ್ಕೃತಿಗೆ ಮಾರು ಹೋಗದೆ ನಮ್ಮ ಪೂರ್ವಜರಿಂದ ರೂಪಿಸಲ್ಪಟ್ಟ ನಮ್ಮ ನೆಲಮೂಲ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗೋಣವೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಕುಲ್ ಬೆಳ್ಳುಬ್ಬಿ ಸಂಕ್ರಾಂತಿಯ ವಿಶೇಷತೆಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜೆ. ಎಚ್. ಹೊಸೂರ್, ಬಿ. ಪಿ. ಮುಳ್ಳೂರ್, ಎ. ಎನ್. ಕುರಹಟ್ಟಿ, ಬಿ. ಜಿ. ಸಿಂದಗಿ, ಯು. ಟಿ. ಹುಂಡೆಕಾರ್, ವಿ. ಎ. ಕುಲಕರ್ಣಿ, ವಿ. ವೈ. ಹಿಪ್ಪರಗಿ, ಲಕ್ಷ್ಮಣ ಮಾತಿನ ಇತರರು ಇದ್ದರು.