ವಿಜೃಂಭಣೆಯಿಂದ ನೀಲಗಂಗಾಂಬಿಕಾ ದೇವಿ ಜಾತ್ರೆ
ತಾಳಿಕೋಟೆ 15: ತಾಲೂಕಿನ ಬಳಗಾನೂರ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಧರ್ಮಪತ್ನಿ ನೀಲಗಂಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವವು ಸೋಮವಾರ ಸಂಜೆ ಭಕ್ತಿ, ಶ್ರದ್ಧೆ, ಸಡಗರಗಳಿಂದ ನೆರವೇರಿತು.
ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳು ತೇರಿಗೆ ಉತ್ತತ್ತಿ, ಬಾಳೆ, ಕಬ್ಬು ಎಸೆದು ಸಂಭ್ರಮಿಸಿದರು. ರಥೋತ್ಸವದ ನಂತರ ಅಗ್ಗಿ ಹಾಯುವ ಕಾರ್ಯಕ್ರಮ, ಮದ್ದು ಸುಡುವುದು ಹಾಗೂ ದೀಪೋತ್ಸವ ಜರುಗಿತು. ರಥೋತ್ಸವದ ಮುನ್ನ ಕುದುರೆ ಕುಣಿತ ಗಮನ ಸೆಳೆಯಿತು. ರಾತ್ರಿ ಗ್ರಾಮದ ನೀಲಗಂಗಾ ನಾಟ್ಯ ಸಂಘ ವತಿಯಿಂದ ಸಾವು ತಂದ ಸೌಭಾಗ್ಯ ಅರ್ಥಾತ್ ಮಸಣ ಸೇರಿದ ಮಲ್ಲಿಗೆ ಹೂ ನಾಟಕ ಪ್ರದರ್ಶನ ನಡೆಯಿತು.
ಪುರಾಣ ಮಂಗಲ, ಕುಂಭಮೇಳ: ಜಾತ್ರಾ ಉತ್ಸವದ ಅಂಗವಾಗಿ ಬೆಳಿಗ್ಗೆ ನೀಲಗಂಗಾಂಬಿಕಾ ದೇವಿ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಮಹಾಮಂಗಳಾರತಿ ನಡೆದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರಿಂದ ಕುಂಭಮೇಳ ಹಾಗೂ ಬಸವಧ್ವಜ ಅಶ್ವದಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಭಾನುವಾರ ನಡೆಯಿತು. ರಾತ್ರಿ ಮಾರುತೇಶ್ವರ ಭಜನಾ ಮಂಡಳಿಯವರಿಂದ ಶಿವಭಜನೆ ಅನ್ನ ಸಂತರೆ್ಣ ಜರುಗಿತು.
ಬೃಹತ್ ರಕ್ತದಾನ ಶಿಬಿರ: ನೀಲಗಂಗಾ ಜಾತ್ರಾಕಮಿಟಿ ಹಾಗೂ ಕೊಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಜರುಗಿತು. ಕೊಣ್ಣೂರ ವೈದ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ಇತರರು ಉಪಸ್ಥಿತರಿದ್ದರು. ಸಂಜೆ ಸಂತೆಕೆಲ್ಲೂರ ಘನಮಠ ಶಿವಯೋಗಿಗಳ ಪುರಾಣವು ಯಾದಗಿರಿ ಬೀಳಗಿಮಠದ ಪಂ.ಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಒಂದು ತಿಂಗಳ ಕಾಲ ನಡೆದು ಮಹಾಮಂಗಲವಾಯಿತು. ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಬೃಹತ್ ಜಾನುವಾರು ಜಾತ್ರೆಗೆ ಚಾಲನೆ:ಜ.13ರಿಂದ ಜ.17ರವರೆಗೆ ನಡೆಯುವ ಬೃಹತ್ ಜಾನುವಾರ ಜಾತ್ರೆಗೆ ಚಾಲನೆ ದೊರೆಯಿತು.