ನವದೆಹಲಿ, ನ.15 : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವುದಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಬಗ್ಗೆ ನಂಬಿಕೆ ಹೆಚ್ಚಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ ಮತ್ತು ಸಮಯ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂದು ಹೇಳಿದ್ದೆ. ಜಾರಿ ನಿರ್ದೇಶನಾಲಯ ತನ್ನ ಪ್ರಯತ್ನ ಮಾಡುತ್ತಲೇ ಇದೆ. ಇಡೀ ರಾಜ್ಯದ ಜನತೆ ತಮಗಾಗಿ ಹರಕೆ, ಪೂಜೆ ಮಾಡಿದ್ದು, ಪೂಜಾ ಫಲ ಇವತ್ತು ವರವಾಗಿದೆ ಎಂದರು.
ಕಾನೂನು ಪ್ರಕಾರವೇ ವ್ಯವಹಾರ ಮಾಡಿಕೊಂಡು ಬಂದಿರುವುದರಿಂದ ಆತ್ಮ ಸ್ಥೈರ್ಯದಿಂದ ಹೋರಾಟ ಮಾಡುತ್ತಿದ್ದೇವೆ. ಜನರ ನಂಬಿಕೆ, ಹೋರಾಟ, ಪ್ರೀತಿಗೆ ಜಯ ಸಿಕ್ಕಿದೆ ಎಂದು ಶಿವಕುಮಾರ್ ಹೇಳಿದರು.
ಉಪ ಚುನಾವಣಾ ಪ್ರಚಾರಗಳಲ್ಲಿ ತೊಡಗಿಸಿಕೊಳ್ಳುವ ವಿಚಾರವಾಗಿ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ, ಹೈಕಮಾಂಡ್ ಸೂಚಿಸಿದಂತೆ ಕೆಲಸ ಮಾಡುತ್ತೇನೆ ಎಂದರು.
ಸದನದಲ್ಲಿ ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜು ಅವರಿಗೆ ಸವಾಲು ಹಾಕಿರುವ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅನರ್ಹರ ಶಾಸಕರನ್ನು ಸೋಲಿಸುವುದೇ ತಮ್ಮ ಗುರಿ ಎಂದು ಎಚ್ .ಡಿ.ಕುಮಾರಸ್ವಾಮಿ ಹೇಳಿರುವುದು ಜೆಡಿಎಸ್ ನಿರ್ಧಾರ. ಅದಕ್ಕೂ
ತಮಗೂ ಯಾವುದೇ ಸಂಬಂಧವಿಲ್ಲ ಎಂದರು.