ನವದೆಹಲಿ, ನ 4: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ ಅಪಾಯಕಾರಿ ಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಇಂದಿನಿಂದ ಸಮ - ಬೆಸ ಯೋಜನೆ ಜಾರಿಗೆ ಬಂದಿದೆ. ವಾಹನ ದಟ್ಟಣೆ ಮತ್ತು ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ದೆಹಲಿ ಸರ್ಕಾರ ಇಂದಿನಿಂದ ಸಮ - ಬೆಸ ಯೋಜನೆಯನ್ನು ಮತ್ತೆ ಜಾರಿಗೆ ತಂದಿದೆ. ಈ ವ್ಯವಸ್ಥೆ ನ 15 ರವರೆಗೆ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಜಾರಿಯಲ್ಲಿರಲಿದೆ. ವಾಯುಮಾಲಿನ್ಯವನ್ನು ತಡೆಗಟ್ಟಲು ಕೈಗೊಂಡ ಎಲ್ಲಾ ಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ಫಲ ಕೊಡದೇ ಇರುವ ಹಿನ್ನೆಲೆಯಲ್ಲಿ ಮತ್ತೆ ಸಮ - ಬೆಸ ಯೋಜನೆ ಸೋಮವಾರದಿಂದ ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಭಾನುವಾರ ನ 3 ರಂದು ವಾಯುಮಾಲಿನ್ಯ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿದ್ದು ದೆಹಲಿ ಒಂದು ರೀತಿಯಲ್ಲಿ ಗ್ಯಾಸ್ ಚೇಂಬರ್ ರೀತಿಯಲ್ಲಿ ಪರಿವರ್ತನೆಯಾಗಿತ್ತು, ಉಸಿರಾಟವೂ ಕಷ್ಟಕರವಾಗಿತ್ತು. ಇದರ ಪರಿಣಾಮ ಇಡೀ ದೆಹಲಿಯಲ್ಲಿ ಕತ್ತಲು ಆವರಿಸಿಕೊಂಡು ಹತ್ತಾರು ವಿಮಾನಗಳ ಹಾರಾಟ ರದ್ದುಪಡಿಸಲಾಗಿತ್ತು.