ಮಳೆ ತಗ್ಗಿದರೂ ನಿಲ್ಲದ ಪ್ರವಾಹ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

 ಬೆಳಗಾವಿ/ಮಂಗಳೂರು/ಬೆಂಗಳೂರು, ಆ 11      ರಾಜ್ಯದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಹಾಗೂ ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮಳೆಯ ಪ್ರಮಾಣ ತಗ್ಗಿದ್ದರೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.  ಬೆಳಗಾವಿಯಲ್ಲಿ 7 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ, ವೇದಗಂಗಾ ನದಿ, ದೂದಗಂಗಾ ನದಿ, ಮಲಪ್ರಭಾ ನದಿ, ಘಟಪ್ರಭಾ ನದಿಗಳು ಸೇರಿದಂತೆ ಏಳು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ 14 ತಾಲೂಕಿನ 245ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಜಿಲ್ಲೆಯ ನೆರೆ ಬಾಧಿತ ಪ್ರದೇಶಗಳಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಕೋಟೆ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಡೆ ಯಾಗಿದ್ದು, ಕಂಪ್ಲಿ ಮತ್ತು ಗಂಗಾವತಿ ನಡುವಿನ ಸಂಚಾರ ಸ್ಥಗಿತಗೊಂಡಿದೆ. ತುಂಗಭದ್ರಾ ಜಲಾಶಯಕ್ಕೆ ತುಂಗಾ ಮತ್ತು ಭದ್ರ ಜಲಾಶಯದಿಂದ ಸುಮಾರು 2 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಲಾಗಿದೆ. ತುಂಗಭದ್ರಾ ನದಿ ಪಾತ್ರದ ಕೋಟೆ ಪ್ರದೇಶದ ಆಂಜನೇಯ ದೇವಸ್ಥಾನ, ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನದಿಗಳು ಉಕ್ಕಿ ಹರಿಯುತ್ತಿವೆ. ಪಶ್ಚಿಮ ಘಟ್ಟಗಳಲ್ಲಿ ನಿರಂತರ ಸುರಿದ ಮಳೆಗೆ  ಜಿಲ್ಲೆಯ ಜೀವ ನದಿ ನೇತ್ರಾವತಿ, ಕುಮಾರಧಾರ  ಭೋರ್ಗರೆಯುತ್ತಾ ಸಮುದ್ರಕ್ಕೆ ಸಾಗುತ್ತಿದ್ದು ಬಂಟ್ವಾಳದಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ರಾತ್ರಿ ಮಳೆಯ ಪ್ರಮಾಣ ಇಳಿಕೆ ಯಾಗಿದ್ದರಿಂದ ನೇತ್ರಾವತಿಯ ನದಿಯ ನೀರಿನ ಮಟ್ಟ ಕಡಿಮೆಯಾಗಿತ್ತು. ಇಂದು ಬೆಳಿಗ್ಗೆ ನೇತ್ರಾವತಿ ನೀರಿನ ಮಟ್ಟ 9.1 ಅಡಿ ಅಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ತಿಳಿಸಿದ್ದಾರೆ.  ಬಂಟ್ವಾಳ ಪೇಟೆ ಮತ್ತು ಪಾಣೆಮಂಗಳೂರಿನಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ನಾಶ-ನಷ್ಟ ಉಂಟಾಗಿದೆ. ಬಂಟ್ವಾಳದಿಂದ ಧರ್ಮಸ್ಥಳಕ್ಕೆ ಹೋಗುವ ಜಕ್ರಿಬೆಟ್ಟು ಎಂಬಲ್ಲಿ ರಸ್ತೆಗೆ ನೀರು ಬಂದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆದರೆ ರಾತ್ರಿಯಿಂದ ನೀರಿನ ಮಟ್ಟ ಕಡಿಮೆಯಾಗಿದ್ದರಿಂದ  ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಜಿಕೇಂದ್ರದಲ್ಲಿರುವ ಕುಟುಂಬಗಳು ಕೂಡ ಮರಳಿ ವಾಪಸು ಮನೆಯ ಕಡೆಗೆ ಹೆಜ್ಜೆಹಾಕುತ್ತಿವೆ. ಚಿತ್ರದುರ್ಗ-ಶಿವಮೊಗ್ಗ ರಸ್ತೆಯಲ್ಲಿ ಬಸ್ಗಳು ಸಂಚರಿಸುತ್ತಿವೆ.  ಕೆ.ಆರ್. ಪೇಟೆಯಲ್ಲಿ ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ಕಿಕ್ಕೇರಿ-ಮಂದಗೆರೆ ನಡುವಿನ ಸೇತುವೆ ಮುಳುಗಡೆಯಾಗಿದೆ. ಮೈಸೂರಿನ ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯದಿಂದ ಕಾವೇರಿ ನದಿಗೆ 1 ಲಕ್ಷ ಕ್ಯುಸೆಕ್  ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಸಮೀಪ ನದಿ ಭೋರ್ಗರೆ ಯುತ್ತಿದೆ.  ಇತಿಹಾಸ ಪ್ರಸಿದ್ಧ ವೆಲ್ಲಿಸ್ಲಿ ಸೇತುವೆಯ ಮೇಲೆ ಜನ ಸಂಚಾರ ನಿಷೇಧಿಸಲಾಗಿದೆ. ಕಬಿನಿ ಮತ್ತು ಕೆಆರ್ ಎಸ್ ಜಲಾಶಯಗಳಿಂದ ಹೆಚ್ಚಿನ ನೀರನ್ನು ಹೊರಗೆ ಬಿಡುತ್ತಿರುವುದರಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ದಾಸನಪುರ ಗ್ರಾಮಕ್ಕೆ ನೀರು ನುಗ್ಗಿದ್ದು, ನೂರಾರು ಮನೆಗಳು ಜಲಾವೃತವಾಗಿದೆ. ಗ್ರಾಮಸ್ಥರದಲ್ಲಿ ಆತಂಕ ಮೂಡಿದೆ.  ಮೈಸೂರು-ನಂಜನಗೂಡು ರಸ್ತೆ ಬಂದ್ ಆಗಿದೆ. ಅದೇ ರೀತಿ ಗುಂಡ್ಲಪೇಟೆ-ಕ್ಯಾಲಿಕೆಟ್ ರಸ್ತೆ, ಮೈಸೂರು-ಸುತ್ತೂರು  ರಸ್ತೆ ಸಂಪೂರ್ಣ ಬಂದ್ ಆಗಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆ ಮುಂದುವರಿದಿದ್ದು, ಮೂಡಿಗೆರೆ ತಾಲೂಕಿನ ಬಳಿಗೆ ಗ್ರಾಮದಲ್ಲಿ ಗುಡ್ಡ ಕುಸಿದು ಕಾಫಿ ತೋಟಕ್ಕೆ ಹಾನಿಯಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಗಿರಿಶ್ರೇಣಿ ಮಾರ್ಗದ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಗೆ ಪ್ರವಾಸಿಗರ ಸಂಚಾರವನ್ನು ಇದೇ 14ರವರೆಗೆ ನಿಷೇಧಿಸಲಾಗಿದೆ. ಸತತ ಮಳೆಯಿಂದಾಗಿ ಗಿರಿ ಮಾರ್ಗದಲ್ಲಿ ಕೆಲವೆಡೆ ಗುಡ್ಡ ಕುಸಿದಿದೆ, ಹೀಗಾಗಿ ಈ ಭಾಗಕ್ಕೆ ಪ್ರವಾಸಿಗರ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಚಾರ್ಮುಡಿ, ಶಿರಾಡಿ ಘಾಟ್ ರಸ್ತೆಗಳನ್ನು ಬಂದ್ ಮಾಡಲಾಗಿದೆ, ಕೊಟ್ಟಿಗೆಹಾರ-ಕಳಸ-ಹೊರನಾಡು ಮತ್ತು ಮೂಡಿಗೆರೆ-ಸಕಲೇಶಪುರ ರಸ್ತೆಗಳು ಕೂಡ ಬಂದ್ ಆಗಿವೆ. ಸ್ಥಳೀಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್ಆರ್ ಟಿಸಿ ಚಿಕ್ಕಮಗಳೂರು ವಿಭಾಗ ತಿಳಿಸಿದೆ. ಜಯಪುರ ಮತ್ತು ಕೊಪ್ಪದ ನಡುವೆ ಭೂ ಕುಸಿತ ಉಂಟಾಗಿದ್ದು, ರಸ್ತೆಯನ್ನು ವಾಹನ ಸಂಚಾರಕ್ಕೆ ಸುಗಮಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕಗನ್ನಿ, ಗನ್ನಿಕಡ ಹಾಗೂ ಹುಲಿವಾಲ ಗ್ರಾಮಗಳಿಗೆ ಗೊರೂರು ಜಲಾಶಯದ ಹೊಳಹರಿವಿನಿಂದ ಭಾರಿ ಪ್ರಮಾಣದ ನೀರು ನುಗ್ಗಿದ್ದು ಸಂಸದರಾದ ಪ್ರಜ್ವಲ್ ರೇವಣ್ಣ ನವರು ನಿನ್ನೆ ತಡರಾತ್ರಿ 12.15 ರ ಸುಮಾರಿಗೆ ಈ ಗ್ರಾಮಗಳಿಗೆ ಭೇಟಿ ನೀಡಿ ಯಾವುದೇ ತೊಂದರೆಯಾಗದ ರೀತಿ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ. ಇದೆ ಸಮಯದಲ್ಲಿ ಚನ್ನರಾಯಪಟ್ಟಣದಿಂದ ಹೊಳೆನರಸೀಪುರ ಮಾರ್ಗವಾಗಿ ಅರಕಲಗೂಡು ಮತ್ತು ಸೋಮವಾರಪೇಟೆಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಮಾರ್ಗ ಮಧ್ಯೆಯೇ ತಡೆದು ಪ್ರವಾಹದ ಭೀಕರತೆಯನ್ನು ತಿಳಿಸಿ ವಾಪಸ್ ಕಳುಹಿಸಿದ್ದಾರೆ. ಯಾದಗಿರಿ ಜಿಲ್ಲೆಯ ಗೆದ್ದಲಮರಿ ಎಂಬಲ್ಲಿ ಕುಟುಂಬವೊಂದು ಕಳೆದ ಎರಡು ದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಈ ಮಧ್ಯೆ ಪರಿಹಾರ ಮತ್ತು ರಕ್ಷಣಾ ಕಾರ್ಯ ಚುರುಕುಗೊಂಡಿದ್ದು, ಸಾರ್ವಜನಿಕರು, ಸಂಘ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ.