ರೋಣ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ
ಗದಗ 15: ರೋಣ ಮತಕ್ಷೇತ್ರದಲ್ಲಿ ಶಾಸಕ ಜಿ.ಎಸ್. ಪಾಟೀಲ ನೇತೃತ್ವದಲ್ಲಿ 197 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಜಿಲ್ಲೆಯ ರೋಣ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ರೋಣ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಸಿರಿಧಾನ್ಯ ಅತ್ಯಂತ ಜನಪ್ರಿಯ ಉತ್ಪಾದನೆಯಲ್ಲೊಂದಾಗಿದ್ದು, ಜಗತ್ತಿನಲ್ಲಿ ಸಿರಿಧಾನ್ಯವನ್ನು ಹೆಚ್ಚು ಹೆಚ್ಚು ಬೆಳೆಯಲು ಪ್ರಯತ್ನಿಸಲಾಗುತ್ತಿದೆ.
ಅದಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಿರಿಧಾನ್ಯ ಹೆಚ್ಚು ನಾರಿನಾಂಶ ಇರುವ ಆಹಾರಧಾನ್ಯ. ಹೆಚ್ಚಾಗಿ ಬಳಸುವುದರಿಂದ ನಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಡಯಾಬಿಟಿಸ್ ನಿಯಂತ್ರಣಕ್ಕೆ ಅನುಕೂಲವಾಗುತ್ತದೆ ಎಂದರುಗ್ಯಾರಂಟಿ ಯೋಜನೆ ಜಾರಿ ಮಾಡಿದ ಮೇಲೆ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ವಿರೋಧ ಪಕ್ಷದವರು ನಮ್ಮ ಮೇಲೆ ಟೀಕೆ ಮಾಡುತ್ತಿದೆ. ಅಭಿವೃದ್ಧಿ ಗೆ ಹಣ ಇಲ್ಲದೆ ಹೋದರೆ ಇಷ್ಟೊಂದು ಕಾರ್ಯಗಳನ್ನು ಮಾಡಲು ಸಾಧ್ಯ ವಿರಲಿಲ್ಲ ಎಂದರು.ವಿರೋಧ ಪಕ್ಷದವರು ರಾಜ್ಯದ ಜನತೆಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಸಹಾಯಬಾಗಬಾರದು, ಸಮಾನತೆ ಬರಬಾರದು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳ ಜೊತೆಗೆ ಬಡವರಿಗೆ ಮಾಡುವ ಕಾರ್ಯಕ್ರಮಗಳಿಗೆ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.1,20,000 ಕೋಟಿ ಹಣವನ್ನು ಈ ವರ್ಷ ರಾಜ್ಯ ಸರ್ಕಾರ ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ. ಇದಲ್ಲದೆ 52000 ಕೋಟಿ ರೂಪಾಯಿಯನ್ನು ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ಜೇಬಿಗೆ ನೇರವಾಗಿ ಹಾಕುತ್ತಿದ್ದೇವೆ. ಹೀಗಿದ್ದರು ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ವಿರೋದಿಗಳು ಪದೇ ಪದೇ ಸುಳ್ಳು ಹೇಳಿ, ಅವರ ಸುಳ್ಳನ್ನು ಸತ್ಯ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ.
ಆದರೆ ರಾಜ್ಯದ ಜನತೆ ಇವರ ಸುಳ್ಳು ನಂಬುವಷ್ಟು ಮೂರ್ಖರಲ್ಲ ಎಂದರು. ರಾಜ್ಯದ 4.5 ಕೋಟಿ ಮಂದಿ ಗ್ಯಾರಂಟಿ ಯೋಜನೆಗಳ ನೇರ ಲಾಭ ಪಡೆಯುತ್ತಿದ್ದಾರೆ. ಇದಲ್ಲದೆ ರಸ್ತೆ, ನೀರು, ಕೃಷಿ, ನೀರಾವರಿ ಯೋಜನೆಗಳಿಗೂ ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದೇವೆ. ಸಮಾಜ ಕಲ್ಯಾಣಕ್ಕೆ, ದಲಿತ ಸಮುದಾಯದ ಪ್ರಗತಿಗೆ, ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಸಾವಿರ ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೇವೆ.ಸಂವಿಧಾನ ರಕ್ಷಿಸಲು, ಪ್ರಜಾಪ್ರಭುತ್ವ ಉಳಿಸುವುದಕ್ಕೋಸ್ಕರವಾಗಿ ಎಲ್ಲ ಧರ್ಮವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದೇವೆ. ಜಾತಿ ವ್ಯವಸ್ಥೆಯನ್ನು ತೊಲಗಿಸಿಸಮಾಜದಲ್ಲಿ ಸಮಸಮಾಜವನ್ಮು ನಿರ್ಮಾಣ ಮಾಡಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದರು.ಗಜೇಂದ್ರಗಡದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಉಳಿಸಿ ಕೊಳವೆಬಾವಿಯನ್ನು ಕೊರೆಸಿದ್ದಾರೆ. ಇಂತಹ ಕಾರ್ಯಕ್ರಮ ಮೂಲಕ ನೇರವಾಗಿ ಫಲಾನುಭವಿಗಳಿಗೆ ಹಣ ನೀಡುವ ಕೆಲಸ ಮಾಡುತ್ತಿದ್ದೇವೆ. ಸಾಮಾಜಿಕವಾಗಿ, ಆರ್ಥಿಕವಾಗಿ ಬಲ ತುಂಬಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.ಡಂಬಳದಲ್ಲಿ ತೋಟಗಾರಿಕೆ ಕಾಲೇಜು ಆರಂಭಿಸುವ ಕುರಿತು ಶಾಸಕ ಜಿ.ಎಸ್.ಪಾಟೀಲ ಅವರು ಬೇಡಿಕೆಯಿಟ್ಟಿದ್ದು, ಮುಂದಿನ ಬಜೆಟ್ನಲ್ಲಿ ನೂರಕ್ಕೆ ನೂರಷ್ಟು ಪರಿಗಣಿಸುತ್ತೇವೆ ಎಂದರು.*ಅಭಿವೃದ್ಧಿಯೇ ತಂದೆ-ತಾಯಿ, ಗ್ಯಾರಂಟಿಗಳೇ ಬಂಧುಬಳಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ಇಂದಿನ ಈ ಕಾರ್ಯಕ್ರಮ ಇದೊಂದು ಐತಿಹಾಸಿಕ ಪುಟಕ್ಕೆ ಸೇರುವಂತಹ ಕಾರ್ಯಕ್ರಮ. ಜಿ.ಎಸ್. ಪಾಟೀಲ ಅವರ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಕಲ್ಲುಗಳನ್ನು ನೋಡಿದರೆ ಒಂದು ಮನೆಯನ್ನೇ ಕಟ್ಟಿಸಬಹುದು. ಅಭಿವೃದ್ಧಿಯೇ ತಂದೆ-ತಾಯಿ, ಗ್ಯಾರಂಟಿಗಳೇ ಬಂಧುಬಳಗ ಎಂದು ಹೇಳಿದರು.ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡುವ ಮೂಲಕ ಕೊಟ್ಟ ಮಾತುಗಳನ್ನು ಉಳಿಸಿಕೊಂಡಿದ್ದೇವೆ, ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಅನ್ನಭಾಗ್ಯದಲ್ಲಿ ದಾಸೋಹ, ಗೃಹ ಲಕ್ಷ್ಮೀಯಲ್ಲಿ ಸಬಲೀಕರಣ, ಗೃಹಜ್ಯೋತಿ ಸಮಾಜಕ್ಕೆ ಬೆಳಕು, ಶಕ್ತಿ ಯೋಜನೆ ಮೂಲಕ ಮಹಿಳೆಗೆ ಸ್ವಾತಂತ್ರ್ಯ, ಯುವನಿಧಿ ಕಾಯಕವನ್ನು ನೀಡಲಾಗಿದೆ ಎಂದು ಹೇಳಿದರು.ವಿಪಕ್ಷದವರು ಭಾವನೆಗಳ ಜೊತೆ ರಾಜಕಾರಣ ಮಾಡಿದರೆ, ನಾವು ನಮ್ಮ ನಮ್ಮ ಗ್ಯಾರಂಟಿ ಮೂಲಕ ಬಡವರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ. ಜಿ.ಎಸ್. ಪಾಟೀಲ ಅವರ ಕುಟುಂಬ ಸೇವಕರ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಕರ್ನಾಟಕ ಖನಿಜ ಅಭಿವೃಧ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿರೋಧ ಪಕ್ಷದವರು ಸರಕಾರದ ಖಜಾನೆ ಖಾಲಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ನನ್ನ ಕ್ಷೇತ್ರದಲ್ಲಿ 200 ಕೋಟಿ ರೂ. ಅಧಿಕ ಅನುದಾನದಲ್ಲಿ ಅಭಿವೃದ್ಧಿ ಯೋಜನೆಗಳ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸಲು ಜಿಟಿಟಿಸಿ ಆರಂಭಿಸಲಾಗುತ್ತಿದೆ. ಬಡಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಲು ಆರು ಹಾಸ್ಟೆಲ್ ಆರಂಭಿಸಲಾಗುತ್ತಿದೆ. ನಮ್ಮ ರೋಣ ಮತಕ್ಷೇತ್ರದ ಗ್ರಾಮೀಣ ಒ್ರದೇಶದ ರಸ್ತೆಗಳು ಅಭಿವೃದ್ಧಿಯಾಗಬೇಕು. ಅದೇ ರೀತಿ ಒಣಬೇಸಾಯ ಮಾಡುವ ರೈತರಾಗಿದ್ದು ನೀರಾವರಿ ಯೋಜನೆ ಬಂದಿಲ್ಲ. ಕೃಷ್ಣಾ ನದಿ ಹಾಗೂ ಮಲಪ್ರಭಾ ನದಿ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾಡಬೇಕು. ಮುಂಡರಗಿ ಭಾಗದಲ್ಲಿ ನೂರಾರು ಕೆರೆಗಳನ್ನು ತುಂಬಿಸುವ ಜಾಲವಾಡಗಿ ಯೋಜನೆ ಆರಂಭಿಸಬೇಕು ಎಂದು ಮನವಿ ಮಾಡಿದರು.ವಿಧಾನ ಪರಿಷತ್ ಸದಸ್ಯ, ಸರಕಾರಿ ಮುಖ್ಯಸಚೇತಕ ಸಲೀಂ ಅಹ್ಮದ್, ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಮಾಜಿ ಸಂಸದ ಆರ್.ಎಸ್. ಪಾಟೀಲ, ಐ.ಜಿ. ಸನದಿ, ಮಾಜಿ ಶಾಸಕರಾದ ಬಿ.ಆರ್. ಯಾವಗಲ್ಲ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಬಿ.ಎಸ್. ಪಾಟೀಲ, ಆನಂದಸ್ವಾಮಿ ಗಡ್ಡದೇವರಮಠ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಭರತ್ ಎಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಸೇರಿ ಇತರರು ಇದ್ದರು.
ಬಾಕ್ಸ್ ಜಿ.ಎಸ್.ಪಾಟೀಲರು ಮಂತ್ರಿ ಆಗಲು ಅರ್ಹರು* ಶಾಸಕ ಜಿ.ಎಸ್.ಪಾಟೀಲ್ ಅವರು ನನ್ನ ಬಳಿ ಬರುವುದು ರೋಣಾ ಮತ ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಮಾತ್ರ. ಮುಂದಿನ ಬಜೆಟ್ ನಲ್ಲಿ ಕ್ಷೇತ್ರಕ್ಕೆ ಕೃಷಿ ಕಾಲೇಜು ನೀಡುವಂತೆ ಪಾಟೀಲರು ಒತ್ತಾಯಿಸಿದ್ದಾರೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಕ್ಷೇತ್ರದ ಜನತೆ ಒತ್ತಾಯಿಸಿದ್ದಾರೆ. ಎರಡೂ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರೀಶೀಲಿಸಲಾಗುವುದು. ಜಿ.ಎಸ್.ಪಾಟೀಲರಿಗೆ ಮಂತ್ರಿ ಆಗುವ ಎಲ್ಲಾ ಅರ್ಹತೆಗಳಿವೆ. ಮುಂದೆ ನೋಡೋಣ ಎಂದು ಸಿಎಂ ಭರವಸೆ ನೀಡಿದರು.