ಪ್ರವಾಹ ಪರಿಸ್ಥಿತಿ ವಿಷಮವಾಗುತ್ತಿರುವ ರಾಜ್ಯದ 10 ಜಿಲ್ಲೆಗಳಲ್ಲಿ ಸಾಮಾನ್ಯ ಜನಜೀವನ ತೀವ್ರ ಬಾಧಿತ

 ಬೆಂಗಳೂರು, ಆಗಸ್ಟ್ 7      ರಾಜ್ಯದ 10 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ವಿಷಮವಾಗುತ್ತಿದ್ದು, ಸಾಮಾನ್ಯ ಜನಜೀವನ ತೀವ್ರ ಬಾಧಿತಗೊಂಡಿದೆ. 

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಐವರು ಮೃತಪಟ್ಟಿದ್ದಾರೆ.  

 ಬೆಳಗಾವಿ, ಗೋವಾ ಮತ್ತು ಮುಂಬೈ ನಡುವಿನ ರಸ್ತೆ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದ್ದು, ಪ್ರವಾಹದಿಂದ ಹಾನಿಗೊಳಗಾದ ಅನೇಕ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಿದೆ. ಚಾರ್ಮಡಿ ಘಾಟ್ ವಿಭಾಗದಲ್ಲಿ 5 ಕ್ಕೂ ಹೆಚ್ಚು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದ್ದು, ಇದರಿಂದ ಗೋವಾಕ್ಕೆ ರೈಲು ಸೇವೆಯನ್ನು ಸ್ಥಗಿತಗೊಳಿಸುವಂತಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.  

 ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಭೂಕುಸಿತ ಮತ್ತು ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದ ಕಾರಣ ಗೋವಾ ಮತ್ತು ಮುಂಬೈಗೆ ತೆರಳುವ ಕೆಎಸ್ಆರ್ ಟಿಸಿ ಬಸ್ ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರವಾಹ ಪೀಡಿತ ಹಳ್ಳಿಗಳಲ್ಲಿ ಪ್ರವಾಹದ ನೀರು ಸೇತುವೆಗಳ ಮೇಲೆ ತುಂಬಿ ಹರಿಯುತ್ತಿದೆ. 

 ಅಧಿಕೃತ ಮೂಲಗಳಂತೆ ಬೆಳಗಾವಿ ಜಿಲ್ಲೆಯೊಂದರಲ್ಲೇ 800 ಕ್ಕೂ ಹೆಚ್ಚು ಮನೆಗಳು ಕುಸಿದಿವೆ ಇಲ್ಲವೇ ಭಾಗಶಃ ಹಾನಿಗೊಳಗಾಗಿವೆ. ನೆರೆಯ ಮಹಾರಾಷ್ಟ್ರ ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಆ ಜಲಾಶಯಗಳಿಂದ ಹೊರ ಹರಿವು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕಳೆದ ಒಂದು ವಾರದಿಂದ ಜನರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.  

 ಕಳೆದ 15 ದಿನಗಳಿಂದ ಬೆಳಗಾವಿ, ಯಾದಗಿರಿ, ರಾಯಚೂರು, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗುತ್ತಿದ್ದರೂ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ನೈರುತ್ಯ ಮುಂಗಾರು ಪ್ರಭಾವದಿಂದ ಮಳೆ ಸುರಿಯುತ್ತಿದ್ದು, ಮಲೆನಾಡು ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಾಮಾನ್ಯ ಜೀವನ ಅಸ್ತವ್ಯಸ್ತಗೊಂಡಿದೆ. 

 ರಸ್ತೆಗಳಲ್ಲಿ ಮೊಣಕಾಲುವರೆಗೆ ನೀರು ನಿಂತು ವಾಹನ ಸಂಚಾರ ಸ್ಥಗಿತಗೊಂಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಂಬಂಧಿತ ಜಿಲ್ಲಾಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿವೆ. ಮಹಾರಾಷ್ಟ್ರ 3.6 ಲಕ್ಷ ಕ್ಯೂಸೆಕ್ ಗಿಂತ ಹೆಚ್ಚು ನೀರನ್ನು ಬಿಡುಗಡೆ ಮಾಡುತ್ತಿದೆ.ಒಳಹರಿವನ್ನು ಆಧರಿಸಿ ಬಿಡುಗಡೆಯನ್ನು ನಾಲ್ಕು ಲಕ್ಷ ಕ್ಯೂಸೆಕ್ಗಳಿಗೆ ಹೆಚ್ಚಿಸುವ ಸಾಧ್ಯತೆ ಇರುವುದರಿಂದ ಈಗಾಗಲೇ ತುಂಬಿರುವ ಅಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಮಹಾರಾಷ್ಟ್ರ ಎಚ್ಚರಿಕೆ ನೀಡಿದೆ ಎಂದು ಅಧಿಕೃತ ಮೂಲಗಳು ಯುಎನ್ಐಗೆ ತಿಳಿಸಿವೆ.. 

 ಬೆಳಗಾವಿ ಜಿಲ್ಲಾಡಳಿತ ಇಪ್ಪತ್ತಕ್ಕೂ ಹೆಚ್ಚು ಪರಿಹಾರ ಕೇಂದ್ರಗಳನ್ನು ತೆರೆದಿದೆ. ಅಥಣಿ, ಚಿಕ್ಕೋಡಿ,ರಾಯಭಾಗ, ಕಾಗವಾಡ, ಹುಕ್ಕೇರಿ, ಖಾನಾಪುರ ತಾಲ್ಲೂಕಿನ 96 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದಿಂದ ತೊಂದರೆಗೀಡಾಗಿವೆ. 

 ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಸುಮಾರು 1048 ಕಿ.ಮೀ ರಸ್ತೆಗಳು ಹಾನಿಗೊಂಡಿವೆ. ಅಣೆಕಟ್ಟುಗಳು ಮತ್ತು ಚೆಕ್ ಡ್ಯಾಂಗಳಲ್ಲಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಿಂದಾಗಿ 22 ನೀರು ಕೊಳವೆ ಮಾರ್ಗಗಳು ಮತ್ತು 2571 ವಿದ್ಯುತ್ ಕಂಬಗಳು ಸಹ ಹಾನಿಗೀಡಾಗಿವೆ. ಇದರಿಂದ ಪ್ರವಾಹ ಪರಿಸ್ಥಿತಿ ಇರುವ ಅನೇಕ ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿವೆ. 

 ಸೇನೆ, ಎನ್ಡಿಡಿಆರ್ಎಫ್, ಎಸ್ಡಿಡಿಆರ್ಎಫ್, ಅಗ್ನಿಶಾಮಕ ದಳ ಮತ್ತು ಪರಿಣಿತ ಈಜುಗಾರರ ತಂಡಗಳು ದಿನದ 24 ತಾಸು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿವೆ. 

 ಕೊಡಗು ಜಿಲ್ಲೆಯಲ್ಲಿ ಭೂಕುಸಿತ ವರದಿಯಾಗಿದ್ದು, ಪ್ರವಾಸಿಗರು ಮತ್ತು ಸ್ಥಳೀಯ ಜನರಿಗೆ ನೀರಿನಲ್ಲಿ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಪ್ರವಾಹದ ನೀರು ರಸ್ತೆಗಳಲ್ಲಿ ಮೊಣಕಾಲು ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿರುವುದರಿಂದ  ನಡೆದು ಸಾಗುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.  

 ಒಟ್ಟಾರೆ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ. ಸವಾಲನ್ನು ಎದುರಿಸಲು ಗಂಜಿ ಕೇಂದ್ರಗಳು ಮತ್ತು ಜಾನುವಾರು ಆಶ್ರಯ ಕೇಂದ್ರಗಳನ್ನು ತೆರೆಯುವ ಮೂಲಕ ಅಧಿಕಾರಿಗಳು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ.