ದಕ್ಷಿಣ ಕೊರಿಯಾದಲ್ಲಿ ಕೊವಿದ್‍-19 ಸೋಂಕಿನ ಹೊಸ 91 ಪ್ರಕರಣಗಳು ದೃಢ: ಒಟ್ಟು ಸಂಖ್ಯೆ 9,332 ಕ್ಕೆ ಏರಿಕೆ

ಸಿಯೋಲ್, ಮಾರ್ಚ್ 27, ದಕ್ಷಿಣ ಕೊರಿಯಾದಲ್ಲಿ ಕಳೆದ ಒಂದು ದಿನದಲ್ಲಿ ಕೊವಿದ್‍ -19 ಸೋಂಕಿನ ಪ್ರಕರಣಗಳ ಸಂಖ್ಯೆ 91 ರಿಂದ 9,332 ಕ್ಕೆ ಏರಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಕೆಸಿಡಿಸಿ) ಶುಕ್ರವಾರ ತಿಳಿಸಿದೆ.ಇದೇ ಅವಧಿಯಲ್ಲಿ ಸಾವಿನ ಸಂಖ್ಯೆ 131 ರಿಂದ 139 ಕ್ಕೆ ಏರಿದೆ ಎಂದು ಕೇಂದ್ರ ತಿಳಿಸಿದೆ.  
ದೇಶದಲ್ಲಿ 3,52,000 ಕ್ಕೂ ಹೆಚ್ಚು ಕರೋನವೈರಸ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ಪೈಕಿ 15,219 ಪರೀಕ್ಷೆಗಳ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ.91 ಹೊಸ ಕೊವಿದ್‍-19 ಪ್ರಕರಣಗಳ ಪೈಕಿ 34 ಪ್ರಕರಣಗಳು ಡೇಗು ನಗರದಲ್ಲಿ ದಾಖಲಾಗಿದ್ದರೆ, ಸಿಯೋಲ್ ರಾಜಧಾನಿಯಲ್ಲಿ 12, ಜಿಯೊಂಗ್ಗಿ ಪ್ರಾಂತ್ಯದಲ್ಲಿ 11 ಮತ್ತು ಉತ್ತರ ಜಿಯೊಂಗ್‌ಸಾಂಗ್ ಪ್ರಾಂತ್ಯದಲ್ಲಿ 9 ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ಚೇತರಿಸಿಕೊಂಡ ಜನರ ಸಂಖ್ಯೆ 384 ರಿಂದ 4,528 ಕ್ಕೆ ಏರಿದೆ.ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೊವಿದ್‍-19 ಸೋಂಕನ್ನು ವಿಶ್ವವ್ಯಾಪಿ ಸಾಂಕ್ರಾಮಿಕ ರೋಗವೆಂದು ಘೋಷಿಸಿತು. ವಿಶ್ವಾದ್ಯಂತ 5,31,000 ಕ್ಕೂ ಹೆಚ್ಚು ಜನರು ಕರೋನವೈರಸ್ ಸೋಂಕಿಗೆ ತುತ್ತಾಗಿದ್ದು, 24,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.