ಪುಣೆ, ಏಪ್ರಿಲ್ 1, ಮುಂಬೈನಲ್ಲಿ ಕೊವಿದ್ -19 ಸೋಂಕು ಇನ್ನೂ 16 ಜನರಲ್ಲಿ ದೃಢಪಡುವುದರೊಂದಿಗೆ ಮಾರಕ ವೈರಸ್ನಿಂದ ಮಹಾರಾಷ್ಟ್ರದಲ್ಲಿ ಬುಧವಾರ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 320 ಕ್ಕೆ ತಲುಪಿದೆ.ಪುಣೆಯಲ್ಲಿ ಇಂದು ಎರಡು ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಮಾರಣಾಂತಿಕ ವೈರಸ್ ಈವರೆಗೆ 12 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇದರೊಂದಿಗೆ ಮಹಾರಾಷ್ಟ್ರ ಇಡೀ ದೇಶದಲ್ಲಿ ಹೆಚ್ಚು ಪ್ರಕರಣಗಳನ್ನು ಹೊಂದಿದ ರಾಜ್ಯವಾಗಿ ಮುಂದುವರೆದಿದೆ. ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿರುವ ಜನರ ಮೇಲೆ ಪುಣೆ ನಗರ ಪೊಲೀಸರು ಮತ್ತು ಪಿಂಪ್ರಿ-ಚಿಂಚ್ವಾಡ ಪೊಲೀಸ್ ಅಧಿಕಾರಿಗಳು ಕ್ರಮ ಜರುಗಿಸಲಾರಂಭಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ 1,100 ಕ್ಕೂ ಹೆಚ್ಚು ಜನರ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಪುಣೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯ ಸೇವೆಗಳಲ್ಲಿ ತೊಡಗಿರುವವರು ಮತ್ತು ತುರ್ತು ಪ್ರಕರಣಗಳಿಗೆ ಪೊಲೀಸ್ ಪಾಸ್ ಹೊಂದಿದವರನ್ನು ಹೊರತುಪಡಿಸಿ, ಲಾಕ್ ಡೌನ್ ಸಮಯದಲ್ಲಿ ಸಂಚಾರದಲ್ಲಿ ತೊಡಗಿದ್ದ 800 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.