ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಿಂದ ಮಹತ್ವದ ಘೋಷಣೆ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ನವದೆಹಲಿ 15: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರು ತಿಂಗಳ ಸೆರೆವಾಸದ ಬಳಿಕ ಜಾಮೀನಿನ ಮೇರೆಗೆ ಹೊರಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನೇರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಪಕ್ಷದ ಕಚೇರಿಗೆ ತೆರಳಿ, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಎರಡು ದಿನಗಳ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಮತ್ತೆ ಜನಾಶೀರ್ವಾದ ಸಿಗುವವರೆಗೂ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದರು.

ಬಿಜೆಪಿಯವರು, ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿ ದೆಹಲಿಯಲ್ಲಿ ಸರ್ಕಾರ ರಚಿಸಲು ಬಯಸಿದ್ದರು. ಆದರೆ ಅವರು ನಮ್ಮ ಪಕ್ಷವನ್ನು ಒಡೆಯಲು ಸಾಧ್ಯವಾಗಲಿಲ್ಲ. ಪಕ್ಷದ ಕಾರ್ಯಕರ್ತರಿಂದ ದೂರವಾಗಲೂ ಸಾಧ್ಯವಾಗಲಿಲ್ಲ ಎಂದು ವಾಗ್ದಾಳಿ ನಡೆಸಿದರು. ನಾನು ರಾಜೀನಾಮೆ ನೀಡಿದ ನಂತರ ಪಕ್ಷದ ಸದಸ್ಯರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ನಾನು ಜನರ ಬಳಿಗೆ ತೆರಳಿ ಅವರ ಬೆಂಬಲ ಕೋರುತ್ತೇನೆ ಎಂದು ಕೇಜ್ರಿವಾಲ್ ಹೇಳಿದರು. ಫೆಬ್ರವರಿಯಲ್ಲಿ ನಿಗದಿಯಾಗಿರುವ ದೆಹಲಿಯ ಚುನಾವಣೆಯನ್ನು ಮಹಾರಾಷ್ಟ್ರದ ಚುನಾವಣೆ ಜೊತೆಗೆ ನವೆಂಬರ್‌ನಲ್ಲಿ ನಡೆಸಬೇಕೆಂದು ಕೇಜ್ರಿವಾಲ್ ಒತ್ತಾಯಿಸಿದರು.