ಲೋಕದರ್ಶನ ವರದಿ
ಅಸಂಘಟಿತರಿಗೆ ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿ ಸ್ವಾಗತಾರ್ಹ: ಪ್ರಮೋದ್ ಎಸ್. ಮ್ಹಾಳ್ಸೇಕರ್
ಉತ್ತರ ಕನ್ನಡ 28: ಅಸಂಘಟಿತ ವಲಯವು ಸೇರಿದಂತೆ ದೇಶದ ಪ್ರತಿ ನಾಗರಿಕರಿಗೂ ಸಾಮಾಜಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೊಳಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ನಾಗರಿಕರ ಹಾಗೂ ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಪ್ರಮೋದ್ ಎಸ್. ಮ್ಹಾಳ್ಸೇಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಅಂಕಿ ಅಂಶದ ಪ್ರಕಾರ ದೇಶದಲ್ಲಿ 2036ರ ವೇಳೆಗೆ 60 ವರ್ಷ ಮೇಲ್ಪಟ್ಟವರ ಸಂಖ್ಯೆ 22.7 ಕೋಟಿಗೆ ತಲುಪಲಿದೆ. ಇದು ಒಟ್ಟೂ ಜನಸಂಖ್ಯೆಯ ಶೇ.15 ರಷ್ಟು ಇರಲಿದೆ. ಈ ಸಂಖ್ಯೆ 2050ರ ವೇಳೆಗೆ 34.7 ಕೋಟಿಗೆ ತಲುಪಲಿದೆ. ಈ ಹಿನ್ನೆಲೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಈ ಯೋಜನೆ ನೆರವಾಗಲಿದೆ.
ಅಸಂಘಟಿತ ವಲಯದ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಿರುವುದು ಹಾಗೂ ನಿವೃತ್ತರಿಗೆ ಮತ್ತು ವೃದ್ಧರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಸಮಗ್ರ ಸಾಮಾಜಿಕ ಭದ್ರತೆ ಅಥವಾ ಪಿಂಚಣಿ ಯೋಜನೆ ಜಾರಿಗೊಳಿಸಿ, ಕಾರ್ಮಿಕರಿಗೆ ಅನುಕೂಲಕರವಾಗುವಂತೆ ಯೋಜನೆಯನ್ನು ರೂಪಿಸಿರುವುದನ್ನು ನಮ್ಮ ಸಂಘಟನೆಯು ಬೆಂಬಲಿಸುತ್ತಿದೆ ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.