ಬೆಂಗಳೂರು, ಆ 18 ನೆರೆ ಹಾನಿ ಪ್ರದೇಶಗಳ ಕುರಿತು ಸುದೀರ್ಘವಾಗಿ ಪ್ರಧಾನಿ ಮತ್ತು ಗೃಹಸಚಿವರ ಜೊತೆ ಚರ್ಚೆ ಮಾಡಲಾಗಿದೆ. ಎರಡು ಅಥವಾ ಮೂರು ದಿನದಲ್ಲಿ ಪರಿಹಾರ ಕಾರ್ಯ ಚುರುಕಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ನಗದರಲ್ಲಿ ಮಾತನಾಡಿದ ಬಿಎಸ್ವೈ, ನೆರೆ ಪೀಡಿತರಿಗೆ 10 ಸಾವಿರ ಒಂದೊಂದು ಕುಟುಂಬಕ್ಕೆ ನೀಡಿಕೆಯಲ್ಲಿ ವಿಳಂಬವಾಗಿದೆ. ಇದರ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ. ನೆರೆ ಪೀಡಿತರ ಕಷ್ಟಕ್ಕೆ ತಕ್ಷಣ ಸ್ಪಂದಿಸುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯ. ಪ್ರವಾಹ ಸಂತ್ರಸ್ತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಸರ್ಕಾರ ಸದಾ ನಿಮ್ಮ ಜೊತೆಯಲ್ಲಿದೆ ಎಂದು ಹೇಳಿದರು. ಯಡಿಯೂರಪ್ಪ ಅವರಿಗೆ ಪ್ರಧಾನಿ ಮೋದಿ ಬಳಿ ಹಣ ಕೆಳಲು ತಾಕತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿ, ಅಧ್ಯಯನ ತಂಡ ವರದಿ ನೀಡದೆ ಪರಿಹಾರ ಕೊಡುವುದು ಸಾಧ್ಯವೇ? ಇದನ್ನು ಸಿದ್ದರಾಮಯ್ಯ ಅರಿತುಕೊಳ್ಳಬೇಕು. ಪರಿಹಾರದ ಹಣ ಬಿಡುಗಡೆಯಾದ ಮೇಲೆ ಸಿದ್ದರಾಮಯ್ಯನವರಿಗೆ ಅರ್ಥ ಆಗಲಿದೆ ಎಂದು ಭಾವಿಸಿದ್ದೇನೆ ಎಂದು ಬಿಎಸ್ವೈ ಉತ್ತರ ನೀಡಿದರು. ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ಮಾತನಾಡಿ, ಸಂಚಿವ ಸಂಪುಟ ರಚನೆ ಮಂಗಳವಾರ ನಡೆಯಲಿದೆ. ಅಂದು (ಮಂಗಳವಾರ) 3-4 ಗಂಟೆ ಹೊತ್ತಿಗೆ ಕ್ಯಾಬಿನೆಟ್ ರಚನೆ ಅಂತಿಮ ಆಗಲಿದೆ. ಅಮಿತ್ ಶಾ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಸೋಮವಾರ ಮಧ್ಯಾಹ್ನ ಕ್ಯಾಬಿನೆಟ್ ರಚನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಬಗ್ಗೆ ಅಂತಿಮವಾಗಲಿದೆ. ಮೊದಲ ಹಂತದಲ್ಲಿ 13 - 14 ಮಂದಿ ಸಚಿವ ಸಂಪುಟ ಸೇರಿಕೊಳ್ಳಲಿದ್ದಾರೆ. ಟೆಲಿಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಫೋನ್ ಟ್ಯಾಫಿಂಗ್ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸಲು ಆದೇಶ ಮಾಡಲಾಗಿದೆ. ನಾಳೆ ಈ ಸಂಬಂಧ ಆದೇಶ ಹೊರಡಿಸಲಾಗುವುದು. ಈ ಬಗ್ಗೆ ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರ ಬರಬೇಕು. ತಪ್ಪಿತಸ್ಥರ ವಿರುದ್ದ ಕ್ರಮವಾಗಬೇಕು. ಹೀಗಾಗಿ ಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದರು. ಅನರ್ಹ ಶಾಸಕ ವಿಶ್ವನಾಥ್ ಮಾತನಾಡಿ, ಟೆಲಿಫೋನ್ ಕದ್ದಾಲಿಕೆ ಪ್ರಕರಣದ ಸಿಬಿಐ ತನಿಖೆಗೆ ವಹಿಸಿರುವುದು ಸ್ವಾಗತಾರ್ಹ. ಕೇಂದ್ರದಲ್ಲಿ ಯಾವ ಸರ್ಕಾರ ಇದೆ ಎಂಬುದು ಮುಖ್ಯವಲ್ಲ. ತನಿಖೆಯಿಂದ ಸತ್ಯಾಂಶ ಹೊರ ಬರಬೇಕು ಹಾಗೂ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮವಾಗಲೇಬೇಕು. ಮಾಜಿ ಸಿಎಂ ಕುಮಾರಸ್ವಾಮಿ ಟೆಲಿಫೋನ್ ಕದ್ದಾಲಿಕೆಯಂತ ನೀಚ ಕೆಲಸ ಮಾಡಿದ್ದಾರೆ. ಪೋನ್ ಟ್ಯಾಪಿಂಗ್ ಮಾಡಿ ಬ್ಲಾಕ್ಮೇಲ್ ಮಾಡುವ ಕೆಲಸ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಭಯೋತ್ಪಾದಕರಿಗೂ ಇಂತಹವರಿಗೂ ಏನು ವ್ಯತ್ಯಾಸವಿದೆ. ಇವರೂ ಒಂದು ರೀತಿಯ ಭಯೋತ್ಪಾದಕರಿದ್ದಂತೆ. ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದ ವೇಳೆ ನಮ್ಮ ಪಕ್ಷದ ಸಿಎಂ ನನ್ನ ಪೋನ್ ಕದ್ದಾಲಿಸುವ ನೀಚ ಕೆಲಸ ಮಾಡಿದ್ದಾರೆ. ಈ ಬಗ್ಗೆ ತನಿಖೆ ಗೆ ಆದೇಶಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ವಿಶ್ವನಾಥ್ ಹೇಳಿದ್ದಾರೆ.