ಬೆಂಗಳೂರು, ಫೆ 10, ಅಕ್ರಮ ಸಂಬಂಧ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕಾರು ಚಾಲಕನ ಹತ್ಯೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರು ಚಾಲಕ ಸುನೀಲ್, ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸೇಡಿಗಾಗಿ ತಾನೇ ಈ ಕೊಲೆ ಮಾಡಿರುವುದಾಗಿ ಆರೋಪಿ ರವಿ ಪೊಲೀಸರ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಪತ್ನಿ ಹಾಗೂ ಸುನೀಲ್ ನನ್ನು ಹಲವು ಬಾರಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೆ. ಅಲ್ಲದೇ, ಸುನೀಲ್ ಗೆ ಬುದ್ಧಿವಾದ ಹೇಳಿ ಎಚ್ಚರಿಕೆ ಸಹ ನೀಡಿದ್ದೆ. ಆದರೆ, ತನಗೆ ಎಲ್ಲರ ಪರಿಚಯವಿದೆ ಎಂಬ ಕಾರಣಕ್ಕೆ ಸುನೀಲ್ ನನ್ನ ಮಾತು ಕೇಳಿರಲಿಲ್ಲ. ಹೀಗಾಗಿ ಆತನನ್ನು ಕೊಲೆಮಾಡಿರುವುದಾಗಿ ಆರೋಪಿ ರವಿ ಪೊಲೀಸರಿಗೆ ತಿಳಿಸಿದ್ದಾನೆ.
ಕಳೆದ ಎರಡು ದಿನಗಳ ಹಿಂದೆ ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನ ಅಂತರಸಂತೆಯಲ್ಲಿನ ಬೇಕರಿ ಮುಂದೆ ಚಾಲಕ ಸುನೀಲ್ ನಿಂತಿದ್ದಾಗ, ಆರೋಪಿ ರವಿ ಆತನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಸುನೀಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು.ಸಿಸಿಟಿವಿ ದೃಶ್ಯವಾಳಿ ಆಧರಿಸಿ, ಆರೋಪಿ ರವಿಯನ್ನು ಬೀಚನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.