ಸಚಿವರ ಮಧ್ಯೆ ಭಿನ್ನಾಭಿಪ್ರಾಯ ಇದ್ದರೂ ಅದು ಅವರೊಳಗೆ ಬಗೆಹರಿಯಲಿ: ರಮೇಶ್ ಬಾಬು

ಬೆಂಗಳೂರು, ಏ.4,ಮಹಾಮಾರಿ ಕೊರೋನಾ ಸೋಂಕಿನ ಸಂದರ್ಭದಲ್ಲಿ ಸಚಿವರ  ನಡುವಿನ ವ್ಯತ್ಯಾಸ  ಕೊನೆಗೊಳ್ಳಬೇಕು, ರಾಜ್ಯದ ಜನಸಾಮಾನ್ಯರ ಹಿತ ಪ್ರಮುಖ ಅದ್ಯತೆಯಾಗಬೇಕು.  ಕೊರೊನಾ ಮಹಾಮಾರಿ ಕೊನೆಗೊಳಿಸಲು ರಾಜ್ಯ ಸರ್ಕಾರದ ಸಂಘಟನಾತ್ಮಕ ಹೋರಾಟ ಮುಂಚೂಣಿಗೆ  ಬರಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು,  ರಾಜ್ಯದ  ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಸುಧಾಕರ್ ತಮ್ಮ ಮತ್ತು ವೈದ್ಯಕೀಯ ಸಚಿವರಾದ  ಶ್ರೀರಾಮುಲು ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲವೆಂದು, ಕೆಲವರು ಉದ್ದೇಶ  ಪೂರ್ವಕವಾಗಿ ಸುದ್ದಿ ಹಬ್ಬಿಸುತ್ತಿದ್ದಾರೆಂದು ಹೇಳಿದ್ದಾರೆ. ಇಲಾಖೆಗೆ ಸಂಬಂಧ ಇಲ್ಲದ,  ಬೆಂಗಳೂರು ಉಸ್ತುವಾರಿ ಇಲ್ಲದ, ಸಂಸದೀಯ ಖಾತೆಯೂ ಇಲ್ಲದ ಸಚಿವರಾದ ಸುರೇಶ್ ಕುಮಾರ್  ಅವರನ್ನು ಕೋವಿಡ್ ರೋಗದ ಸಂಬಂಧ ಜವಾಬ್ದಾರಿ ನೀಡಿ ಪತ್ರಿಕಾಗೋಷ್ಠಿಗೆ ಅವಕಾಶ ನೀಡಿದ  ಮುಖ್ಯಮಂತ್ರಿಗಳು ಇದಕ್ಕೆ ಉತ್ತರ ನೀಡಬೇಕು. ಇದರ ಹಿಂದೆ ದುರುದ್ದೇಶದ ಅನುಮಾನ  ಸಚಿವರಿಗೆ ಬಂದರೆ, ಪ್ರಶ್ನೆಯನ್ನು ಅವರು ಅವರ ನಾಯಕರಿಗೆ ಕೇಳಬೇಕು ಎಂದು ರಮೇಶ್ ಬಾಬು ಹೇಳಿದ್ದಾರೆ.
ಕೊರೊನಾ  ರೋಗದಿಂದ ರಾಜ್ಯದ ಜನ ತತ್ತರಿಸಿರುವಾಗ ಸರಕಾರದಿಂದ ಸಹಜವಾಗಿ ಪರಿಹಾರ ಬಯಸುತ್ತಾರೆ. ಈ  ಸಂದರ್ಭದಲ್ಲಿ ನಿಮ್ಮ ಗುಂಪುಗಾರಿಕೆ ನಮಗೆ ಅನವಶ್ಯಕ. ಇದ್ದರೂ ಅದು ನಿಮ್ಮ ನಿಮ್ಮಲ್ಲೇ  ಬಗೆಹರಿಯಲಿ. ಇಬ್ಬರೂ ಇಲಾಖೆಯ ನಿಮ್ಮ ಖಾತೆ ನಿರ್ವಹಿಸಲು ಸಮರ್ಥರು. ಶ್ರೀರಾಮುಲು  ಹಿರಿಯರಾಗಿದ್ದು ಅನುಭವಿಗಳು. ಸುಧಾಕರ್ ಅವರು ಸ್ವತಃ ವೈದ್ಯರು. ನೀವು ಭದ್ಧತೆಯಿಂದ  ಕೆಲಸ ಮಾಡುವಾಗ ನಿಮ್ಮ ಮುಖ್ಯಮಂತ್ರಿ ನಿಮ್ಮನ್ನು ನಿಮ್ಮ ಇಲಾಖೆಯಲ್ಲಿ ಕ್ವಾರೆಂಟೈನ್ಗೆ ಕಳಿಸಿದ್ದು ಯಾಕೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕೊರೊನಾ  ವಿರುದ್ಧ ಸರ್ಕಾರದ ಜೊತೆಗೆ ಜನಸಾಮಾನ್ಯರೂ ಕೈ ಜೋಡಿಸಿದ್ದಾರೆ. ಈ ಹೆಮ್ಮಾರಿ ರೋಗವನ್ನು  ಬೇರು ಸಮೇತ ತೊಡೆದು ಹಾಕಬೇಕು. ಇದರ ದುಷ್ಪರಿಣಾಮ ಅನೇಕ ವರ್ಷ ನಮ್ಮ ದೇಶ ಮತ್ತು ರಾಜ್ಯ  ಕಾಡಲಿದೆ. ಸಂಘಟನಾತ್ಮಕ ಹೋರಾಟ ಇಂದಿನ ಅವಶ್ಯಕತೆ. ಮಂತ್ರಿಗಳು ತಮ್ಮ ನಡುವೆ ವ್ಯತ್ಯಾಸ  ಇದ್ದರೂ ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕು. ಮುಖ್ಯ ಮಂತ್ರಿಗಳು ಎಲ್ಲಾ  ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು.ನಿಮ್ಮ ಮೇಲೆ ಮುಖ್ಯಮಂತ್ರಿಗಳು  ವಿಶ್ವಾಸ ಕಳೆದುಕೊಂಡಿರುವುದಕ್ಕೆ ಈ ರಾಜ್ಯದ ಜನಕ್ಕೆ ಸಾರ್ವಜನಿಕವಾಗಿ ಉತ್ತರ  ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೊರೊನಾ ವಿರುದ್ಧದ  ಹೋರಾಟಕ್ಕೆ ರಾಜ್ಯ ಸರಕಾರ ವಿಶೇಷವಾಗಿ ಜನಸಾಮಾನ್ಯರ, ಸಂಘ ಸಂಸ್ಥೆಗಳ, ವಿರೋಧ ಪಕ್ಷಗಳ  ಸಹಕಾರ ಪಡೆಯಬೇಕು. ಹಿಂದಿನ ನಮ್ಮ ರಾಜ್ಯದ ಆರೋಗ್ಯ ಸಚಿವ ರಮೇಶ್ ಕುಮಾರ್,  ಖಾದರ್, ಶಿವಾನಂದ ಪಾಟೀಲ್ ಹಾಗೂ ಇಲಾಖಾ ಕಾರ್ಯದರ್ಶಿಗಳ ಸಲಹೆ ಸೂಚನೆಗಳನ್ನು  ಪಡೆಯಬೇಕು. ಈ ಸರ್ಕಾರ ತನ್ನದೇ ಆರೋಗ್ಯ ಮತ್ತು ಆರೋಗ್ಯ ಶಿಕ್ಷಣ ಸಚಿವರನ್ನು  ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೋದರೆ ರಾಜ್ಯಕ್ಕೆ ಯಾವ ಸಂದೇಶ ನೀಡುತ್ತದೆ ಮತ್ತು ಈ  ಕಠಿಣ ಸಂದರ್ಭದಲ್ಲಿ ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಇಡಲು ಸಾಧ್ಯವೇ? ಎಂದು ರಮೇಶ್ ಬಾಬು ಪ್ರಶ್ನಿಸಿದ್ದಾರೆ.