ಬಳ್ಳಾರಿ 06: ಬುದ್ಧಿಜೀವಿಗಳಾಗಿರುವ ಅಧ್ಯಾಪಕರು, ಪತ್ರಕರ್ತರು, ಸಾಹಿತಿಗಳು ಒಗ್ಗೂಡಿ ಶ್ರಮಿಸಿದರೆ ಉತ್ತಮ, ಸುಸ್ಥಿರ ಸಮಾಜ ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ. ಬಿ ಅವರು ತಿಳಿಸಿದರು.
ದಲಿತ ಸಾಹಿತ್ಯ ಪರಿಷತ್ತು(ದಸಾಪ), ಜಿಲ್ಲಾ ಘಟಕ ಶನಿವಾರ ಸಂಜೆ ನಗರದ ಮರ್ಚೇಡ್ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 118ನೇ ಜಯಂತಿ ಅಂಗವಾಗಿ ವಿಶೇಷ ಉಪನ್ಯಾಸ ಹಾಗೂ ಹಿರಿಯ ಸಾಧಕ, ಹೋರಾಟಗಾರ ಎ. ಮಾನಯ್ಯ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರಿಗಳ ಜತೆ ಸಂಘ ಸಂಸ್ಥೆಗಳ ಮುಖಂಡರು ಉತ್ರಮ ಬಾಂಧ್ಯವ್ಯ, ಸಹಕಾರ, ಮಾರ್ಗದರ್ಶನ ನೀಡಿದರೆ ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪುತ್ತವೆ ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ಅವರು ಸ್ವಾರ್ಥ ರಹಿತ ನಾಯಕ. ಯಾವಾಗಲೂ ಕರೆ ಮಾಡಿದರೂ ಬೇರೆಯವರ ಸಮಸ್ಯೆ, ಕುಂದುಕೊರತೆಗಳ ಪರಿಹಾರಕ್ಕಾಗಿಯೇ ಮನವಿ ಮಾಡುತ್ತಾರೆ.ಕಾನೂನು ಪರಿಮಿತಿಯಲ್ಲಿ ಕಾರ್ಯನಿರ್ವಹಿಸಲು ಬೆಂಬಲಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ಬಾಬುಜೀ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ಚಿನ್ನಸ್ವಾಮಿ ಸೋಸಲೆ ಅವರು, ರಾಷ್ಟ್ರ ನಾಯಕರುಗಳಾದ ಡಾ. ಬಿ.ಆರ್ ಅಂಬೇಡ್ಕರ್, ಡಾ. ಬಾಬು ಜಗಜೀವನ ರಾಮ್ ಅವರನ್ನು ದೇವರನ್ನಾಗಿ ನೋಡದೇ ಬೌದ್ಧಿಕವಾಗಿ ಅರಿತುಕೊಂಡಾಗ ಮಾತ್ರ ಅವರ ವಿಚಾರ, ತತ್ವಾದರ್ಶಗಳನ್ನು ಅರಿಯಲು ಸಾಧ್ಯ ಎಂದರು. ಈ ಉಭಯ ನಾಯಕರನ್ನು ಬರೀ ಆರಾಧಿಸದೇ ಅವರನ್ನು ಅನುಸರಿಸಿದರೆ ಮಾತ್ರ ಶೋಷಿತ ಸಮುದಾಯಗಳು ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.
ದಲಿತರಿಗೆ 1975ರವರೆಗೆ ದಲಿತರಿಗೆ ಸ್ವಾತಂತ್ರ್ಯದ ಅರಿವೇ ಇರಲಿಲ್ಲ. ನಿಜ ಸಂವಿಧಾನದ ಆಶಯಗಳ ಬಗ್ಗೆ ಗೊತ್ತಿರಲಿಲ್ಲ ಎಂದು ನೊಂದು ನುಡಿದರು. ಸಮಾನತೆ ಎಂಬುದು ಈ ದೇಶದಲ್ಲಿ ಕಬ್ಬಿಣದ ಕಡಲೆಯಾಗಿದೆ. ವ್ಯವಸ್ಥಿತವಾಗಿ ದೇಶದಲ್ಲಿ ಜಾತಿ ಪೋಷಿಸಿಲಾಗುತ್ತಿದೆ ಎಂದು ಟೀಕಿಸಿದರು. ಅಜ್ಞಾನ, ಅಮಾನವೀಯ ಪದ್ಧತಿಗಳನ್ನು ದಲಿತರು ಕೈಬಿಟ್ಟರೆ ಮಾತ್ರ ಉದ್ಧಾರವಾಗಲು ಸಾಧ್ಯ ಎಂದರು.
ಅಭಿನಂದನೆ ಬಳಿಕ ಮಾತನಾಡಿದ ಎ.ಮಾನಯ್ಯ ಅವರು ತಾವು ಮೂರು ದಶಕಗಳ ಕಾಲ ಡಾ.ಸಿದ್ಧಲಿಂಗಯ್ಯ, ಚಂದ್ರ ಪ್ರಸಾದ್ ತ್ಯಾಗಿ, ಡಿ.ಜಿ ಸಾಗರ್ ಮತ್ತಿತರ ಮುಖಂಡರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ದೇಶದ ಸಂವಿಧಾನ ಅಪಾಯದಲ್ಲಿದೆ. ದೇಶದ ಬಹುಜನರು ಸಂವಿಧಾನವನ್ನು ರಕ್ಷಿಸಬೇಕು. ಬುದ್ಧಿ ಜೀವಿಗಳು ಅಪಾಯದ ಕುರಿತು ಜನಸಾಮಾನ್ಯರನ್ನು ಎಚ್ಚರಿಸಬೇಕು ಎಂದು ಮನವಿ ಮಾಡಿದರು. ಮುಂದೆಯೂ ಜನಪರವಾಗಿ ದುಡಿಯುತ್ತೇನೆ ಎಂದು ಹೇಳಿದರು.
ಸಹ ಪ್ರಾಧ್ಯಾಪಕ ಡಾ. ಹೊನ್ನೂರಲಿ ಐ ಅವರು ಮಾತನಾಡಿ, ಮೂರು ದಶಕಗಳಿಂದ ಶೋಷಿತ, ತಳ ಸಮುದಾಯಗಳ ಪರವಾಗಿ ಹೋರಾಡುತ್ತಿರುವ ಎ. ಮಾನಯ್ಯ ಅವರಿಗೆ ದಸಾಪ ಅಭಿನಂದನಾ ಗ್ರಂಥ ಸಲ್ಲಿಸಬೇಕು. ಈ ಕಾರ್ಯಕ್ಕೆ ಸಂಪೂರ್ಣ ತಮ್ಮಬೆಂಬಲವಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುರುಗೋಡು ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್ ರಾಮಕೃಷ್ಣ ಅವರು, ಪ್ರಸ್ತುತ ಸರಕಾರಿ ಕೆಲಸಗಳು ತಳ ಸಮುದಾಯಗಳಿಗೆ ಮರೀಚಿಕೆ ಯಾಗುತ್ತಿದ್ದು, ನಮ್ಮ ಮಕ್ಕಳನ್ನು ಖಾಸಗಿ ಕ್ಷೇತ್ರದ ಹುದ್ದೆಗಳನ್ನು ಪಡೆಯಲು ಸಜ್ಜುಗೊಳಿಸಬೇಕಿದೆ ಎಂದರು.
ಜನರಲ್ ಅಭ್ಯರ್ಥಿಗಳ ಸಮನಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ನಿಟ್ಟಿನಲ್ಲಿ ತರಬೇತಿ ನೀಡಬೇಕಿದೆ ಎಂದರು.
ಬಳ್ಳಾರಿ ಎಕ್ಸ್‌ಪ್ರೆಸ್ ಸಂಪಾದಕ ಡಾ.ಟಿ. ದುರುಗಪ್ಪ ಎ.ಮಾನಯ್ಯ ಅವರ ಹೋರಾಟ, ಸಾಧನೆಗಳ ಕುರಿತು ಮಾತನಾಡಿದರು. ಎಸ್.ಸಿ.ಆರ್ ಸರಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಡಿ.ಸುಧಾಕರ್, ವಿಎಸ್‌ಕೆವಿವಿ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಪ್ರಸಾದ್ ಎನ್.ಎಲ್ ಮಾತನಾಡಿದರು. ಸೇಂಟ್ ಜಾನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹೆಚ್ ಎಸ್ ಶಿವರಾಮ್, ಸಿಎಂಎಸ್ ಮುಖಂಡ ಸಿ.ನರಸಪ್ಪ ವೇದಿಕೆಯಲ್ಲಿ ಇದ್ದರು.
ಚಿಗುರು ಕಲಾ ತಂಡದ ಹುಲುಗಪ್ಪ ಮತ್ತು ಅನುಮಯ್ಯ ತಂಡ ಹಾಗೂ ಸಿರುಗುಪ್ಪದ ದಳವಾಯ್ ವೀರೇಶ್, ಗಂಗಪ್ಪ ತಂಡ ಜಾಗೃತಿ, ಕ್ರಾಂತಿ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಟಿ.ರುದ್ರಮುನಿ, ಡಾ.ಹನುಮೇಶ್, ಗುರುರಾಜ್, ರಫಿ ಶಿಡಗಿನಮೊಳ, ಮಾರೆಪ್ಪ ಎಕೆ, ಡಾ. ಹನುಮೇಶ್, ಶರಣಪ್ಪ, ಡಿ. ಸಿದ್ದೇಶ್, ಯುವ ಮುಖಂಡ ಸಂಗನಕಲ್ಲು ವಿಜಯಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
ದಸಾಪ ಜಿಲ್ಲಾಧ್ಯಕ್ಷ ಡಾ.ನಾಗಪ್ಪ ಬಿ.ಈ ಸ್ವಾಗತಿಸಿದರು. ದಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿ.ಮಂಜುನಾಥ ನಿರೂಪಿಸಿದರು. ಉಪನ್ಯಾಸಕ ಡಾ.ಕೆ.ಬಸಪ್ಪ ವಂದಿಸಿದರು.