ಸುಳ್ಳುಸುದ್ದಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಇಬ್ರಾಹಿಂ ಮನವಿ

ಬೆಂಗಳೂರು, ಏ 8,ಜನರು ಸರ್ವಧರ್ಮ ಸಹಿಷ್ಣುತೆಯ ಭಾವ ಹೊಂದುತ್ತಾ ಸೌಹಾರ್ದತೆಯಿಂದ ಜೀವನ ನಡೆಸುವಂತಾಗಬೇಕು ಎಂದು ಕಾಂಗ್ರೆಸ್ ನಾಯಕ, ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ದಿಷ್ಟ ಧರ್ಮಕ್ಕೆ ಸೇರಿದವರಿಂದ ಸೋಂಕು ಹರಡುತ್ತಿದೆ ಎಂದು ಸುದ್ದಿ ಹಬ್ಬುತ್ತಿದ್ದು ಇದು ಸಮಾಜದ ಸಾಮರಸ್ಯವನ್ನು ಹಾಳುಗೆಡವಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದರು. ಮುಸಲ್ಮಾನ ಬಾಂಧವರು ಮನೆಯಲ್ಲೇ ನಮಾಜ್ ಮಾಡುತ್ತಿದ್ದು ಷಬೆ ಬರಾತ್ ಅನ್ನು ಕೂಡ ಸರಳವಾಗಿ ಮನೆಯಲ್ಲಿಯೇ ಆಚರಿಸಲಿದ್ದಾರೆ. ಮುಂದಿನ ತಿಂಗಳ ರಂಜಾನ್ ಹಬ್ಬಕ್ಕೂ ನಮಾಜ್ ಗೆ ತೆರಳದೆ ಸರಳವಾಗಿ ಆಚರಿಸಲಿದ್ದಾರೆ ಎಂದು ಅವರು ಹೇಳಿದರು.ಕೊರೊನಾ ವೈರಾಣು ಸೋಂಕು ವಿಶ್ವಾದ್ಯಂತ ಹರಡಿದ್ದು ಇದು ಜಾತಿ, ಪಕ್ಷ, ಭಾಷೆ ಎಂಬ ಭೇದವಿಲ್ಲದೇ ಕಾಣಿಸಿಕೊಂಡಿದೆ. ಬೇರೆ ಯಾವ ರಾಷ್ಟ್ರಗಳಲ್ಲೂ ಇದಕ್ಕೆ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಲ್ಲ. ಕುಲಕುಲಕುಲವೆಂದು ಹೊಡೆದಾಡದಿರು ಎಂದು ಸಾರಿದ ಕನಕದಾಸರ ನಾಡಿನಲ್ಲೇ ಈಗ ಧರ್ಮದ ಆಧಾರದ ಮೇಲೆ ಅಪಪ್ರಚಾರ, ಗಲಭೆ ನಡೆಯುತ್ತಿರುವುದು ಆತಂಕಕಾರಿ ಅಂಶವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಅವರು, ಶಾಸಕರು, ಸಂಸದರ ವೇತನ ಕಡಿತ ಮಾಡಿ ಬಡವರಿಗೆ ಆಹಾರ ಒದಗಿಸುವ ಕಾರ್ಯ ನಡೆಯಲಿ. ಆದರೆ ಲಾಕ್ ಡೌನ್ ಸಂಕಷ್ಟ ಎಂದು ಮಧ್ಯಮ ವರ್ಗದ ನೌಕರರ ವೇತನ ಕಡಿತ ಮಾಡದಂತೆಯೂ ಮನವಿ ಮಾಡಿದರು.