ಬೆಂಗಳೂರು, ಫೆ 6 : ಸಂಧ್ಯಾ ಗಳಿಸಿದ ನಾಲ್ಕು ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ ಸೇತು ಎಫ್‌ಸಿ ತಂಡವು ಬರೋಡಾ ಫುಟ್ಬಾಲ್ ಅಕಾಡೆಮಿ ವಿರುದ್ಧ 6-0 ಅಂತರದಲ್ಲಿ ಗೆದ್ದು 4ನೇ ಹೀರೋ ಇಂಡಿಯನ್ ಮಹಿಳಾ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್ ಪ್ರವೇಶ ಮಾಡಿತು.
ಗುರುವಾರ ನಡೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಸೇತು ಎಫ್‌ಸಿ ತಂಡದ ಸಂಧ್ಯಾ ಅವರು ನಾಲ್ಕು ಗೋಲುಗಳನ್ನು ಸಿಡಿಸಿದರು. ಇವರಿಗೆ ಸಾಥ್ ನೀಡಿದ ಹಂಸವೆಲ್ಲಿ ಮತ್ತು ಕಾರ್ತಿಕಾ ಅವರು ತಲಾ ಒಂದೊಂದು ಗೋಲು ಗಳಿಸಿ ತಂಡದ ಗೆಲುವಿಗೆ ನೆರವಾದರು.
ಸೇತು ಎಫ್‌ಸಿ ತಂಡ ಎ ಗುಂಪಿನ ಅಗ್ರ ಸ್ಥಾನೀಯ ಕ್ರಿಪ್ಸಾ ತಂಡದ ವಿರುದ್ಧ ತಮ್ಮ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ನಂತರ, ಎಚ್ಚೆೆತ್ತುಕೊಂಡ ಆಟಗಾರ್ತಿಯರು ಉತ್ತಮ ಪ್ರದರ್ಶನ ತೋರುವಲ್ಲಿ ಸಫಲರಾದರು.
ಪಂದ್ಯದ ಆರಂಭದಲ್ಲಿಯೇ ಸೇತು ಎಫ್‌ಸಿ ತಂಡ ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು. ಪಂದ್ಯದ 9ನೇ ನಿಮಿಷದಲ್ಲಿಯೇ ಸಂಧ್ಯಾ ಅವರು ಮೊದಲ ಗೋಲು ತಂದಿತ್ತರು. ನಂತರ, 15ನೇ ನಿಮಿಷದಲ್ಲಿ ಸಂಧ್ಯಾ ತಮ್ಮ ಎರಡನೇ ಗೋಲನ್ನು ತಂಡಕ್ಕೆೆ ಕೊಡುಗೆಯಾಗಿ ನೀಡಿದರು. 34ನೇ ನಿಮಿಷದಲ್ಲಿ ಹಂಸವೆಲ್ಲಿ ತಂಡಕ್ಕೆೆ ಮೂರನೇ ಗೋಲು ತಂದಿತ್ತರು.
ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದ ಸಂಧ್ಯಾ ಅವರು 75ನೇ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ಪೂರ್ಣಗೊಳಿಸಿದರು. ಇದಾದ ಮೂರು ನಿಮಿಷಗಳ ಅಂತರದಲ್ಲೇ ಕಾರ್ತಿಕಾ ಅವರು ತಮ್ಮ ಮೊದಲನೇ ಗೋಲನ್ನು ತಂಡಕ್ಕೆೆ ಕಾಣಿಕೆ ನಿಡಿದರು. 82ನೇ ನಿಮಿಷದಲ್ಲಿ ಸಂಧ್ಯಾ ತಮ್ಮ ನಾಲ್ಕನೇ ಗೋಲು ಬಾರಿಸಿ ಸೇತು ತಂಡದ 6-0 ಅಂತರದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.