ಸಿಡ್ನಿ, ಮಾ.5, ಭಾರತ ಮತ್ತು ಇಂಗ್ಲೆಂಡ್ ನಡುವಿನ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ಟಾಸ್ ಸಹ ಕಾಣದೆ ರದ್ದಾದ ಪರಿಣಾಮ, ಭಾರತ ಮಹಿಳಾ ತಂಡ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಭಾರಿ ಫೈನಲ್ ಗೆ ಅರ್ಹತೆ ಗಳಿಸಿದೆ.ಗುರುವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದ್ದ ಸೆಮಿಫೈನಲ್ ಪಂದ್ಯ ವರುಣನ ಅವಕೃಪೆಗೆ ಬಲಿಯಾದ ಹಿನ್ನೆಲೆಯಲ್ಲಿ ಎ ಗುಂಪಿನಲ್ಲಿ ಅಜೇಯದೊಂದಿಗೆ 8 ಅಂಕಗಳೊಂದಿಗೆ ಮೊದಲ ಸ್ಥಾನ ಗಳಿಸಿದ್ದ ಹರ್ಮನ್ ಪ್ರೀತ್ ಕೌರ್ ಬಳಗ ಪ್ರಶಸ್ತಿಗೆ ಸುತ್ತಿಗೆ ಮುನ್ನಡೆದಿದೆ. ಇಂಗ್ಲೆಂಡ್ ದ್ವಿತೀಯ ಸ್ಥಾನ ಗಳಿಸಿದ್ದ ಕಾರಣ ಪ್ರಶಸ್ತಿ ಸುತ್ತಿಗೆ ಮುನ್ನಡೆಯುವಲ್ಲಿ ವಿಫಲಗೊಂಡಿದೆ.ಗುರುವಾರ ಬೆಳಗ್ಗೆಯಿಂದಲೂ ಧಾರಾಕಾರ ಮಳೆ ಸುರಿದ ಪರಿಣಾಮ ಅಂಪೈರ್ ಮತ್ತು ಮ್ಯಾಚ್ ರೆಫರಿ ಭಾರತೀಯ ಕಾಲಮಾನ ಬೆಳಗ್ಗೆ 10.44ಕ್ಕೆ ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು.ಐಸಿಸಿ ಇತಿಹಾಸದಲ್ಲೇ ಇದೇ ಮೊದಲ ಸಲ ಫೈನಲ್ ಪ್ರವೇಶಿಸಿರುವ ಭಾರತ, ಮಾರ್ಚ್ 8ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾ ತಂಡಗಳಲ್ಲಿ ಒಬ್ಬರನ್ನು ಎದುರಿಸಲಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಸೆಮಿಫೈನಲ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಸಿಡ್ನಿ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ. ಆದರೆ ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಆತಂಕ ಎದುರಾಗಿದೆ. ಒಂದು ವೇಳೆ ಈ ಪಂದ್ಯವೂ ರದ್ದಾದರೆ, ಲೀಗ್ ಹಂತದಲ್ಲಿ ಬಿ ಗುಂಪಿನಲ್ಲಿ 7 ಅಂಕಗಳೊಂದಿಗೆ ಅಗ್ರಸ್ಥಾನ ಹೊಂದಿರುವ ಆಫ್ರಿಕಾ ಮಹಿಳಾ ತಂಡ ಫೈನಲ್ ಪ್ರವೇಶಿಸಲಿದ್ದು, ಪ್ರಶಸ್ತಿಗಾಗಿ ಭಾರತ ತಂಡವನ್ನು ಎದುರಿಸಲಿದೆ.ಹಿಂದಿನ ಆವೃತ್ತಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪರಾಭವಗೊಳ್ಳುವುದರೊಂದಿಗೆ ಭಾರತ ವನಿತೆಯರ ತಂಡ ಪ್ರಶಸ್ತಿ ಸತ್ತುಗೇರುವಲ್ಲಿ ವಿಫಲಗೊಂಡಿತ್ತು. ನಾರ್ತ್ ಸೌಂಡ್ ನಲ್ಲಿ ನಡೆದ 2018ರ ವಿಶ್ವಕಪ್ ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ್ದ ಭಾರತ 112 ರನ್ ಗಳಿಗೆ ಆಲೌಟಾದರೆ, ಇಂಗ್ಲೆಂಡ್ ತಂಡ ಕೇವಲ 2 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿ 8 ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಫೈನಲ್ ಪ್ರವೇಶಿತ್ತು. ಈ ಮಧ್ಯೆ, 8ರಂದು ಮೆಲ್ಬೋರ್ನ್ ನಲ್ಲಿ ನಿಗದಿಯಾಗಿರುವ ಫೈನಲ್ ಪಂದ್ಯ ಒಂದು ವೇಳೆ ಮಳೆಯಿಂದಾಗಿ ರದ್ದಾರೆ ಮೀಸಲು ದಿನವಾದ ಸೋಮವಾರ ಪಂದ್ಯ ನಡೆಯಲಿದೆ. ಸದ್ಯದ ಹವಾಮಾನ ವರದಿ ಪ್ರಕಾರ ಫೈನಲ್ ಗೆ ಯಾವುದೇ ರೀತಿಯ ಮಳೆ ಅಡಚಣೆ ಉಂಟಾಗುವುದಿಲ್ಲ ಎನ್ನಲಾಗಿದೆ.