ಎಫ್ಐಎಚ್ ಹಾಕಿ ಶ್ರೇಯಾಂಕ: 4ನೇ ಸ್ಥಾನಕ್ಕೇರಿದ ಭಾರತ ಪುರುಷರ ತಂಡ

ಸನ್ನೆ, ಮಾ 3, ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ (ಎಫ್ಐಎಚ್) ಬಿಡುಗಡೆ ಮಾಡಿರುವ ವಿಶ್ವ ಹಾಕಿ ಶ್ರೇಯಾಂಕದಲ್ಲಿ ಭಾರತ ಪುರುಷರ ಹಾಕಿ ತಂಡ ನಾಲ್ಕನೇ ಸ್ಥಾನ ಪಡೆದಿದೆ. ಆ ಮೂಲಕ 2003ರ ಬಳಿಕ ಎಫ್ಐಎಚ್ ಶ್ರೇಯಾಂಕದಲ್ಲಿ ಶ್ರೇಷ್ಠ ಸ್ಥಾನ ಪಡೆಯುವಲ್ಲಿ ಭಾರತ ಸಫಲವಾಯಿತು.ಎಫ್ಐಎಚ್ ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಪ್ರಕಾರ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಭಾರತ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಎರಡನೇ ಆವೃತ್ತಿಯ ಎಫ್ಐಎಚ್ ಹಾಕಿ ಪ್ರೊ ಲೀಗ್ ಟೂರ್ನಿಯ ಆರಂಭಿಕ ಮೂರು ಸುತ್ತುಗಳಲ್ಲಿ ಭಾರತ ಅದ್ಭುತ ಪ್ರದರ್ಶನವನ್ನು ತೋರಿದ ಪರಿಣಾಮ ಶ್ರೇಯಾಂಕದಲ್ಲಿ ಗಮನಾರ್ಹ ಏರಿಕೆ ಕಾಣಲು ಸಾಧ್ಯವಾಗಿದೆ.ಕಳೆದ ಜನವರಿಯಲ್ಲಿ ಬೆಲ್ಜಿಯಂ ತಂಡ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. ಇನ್ನುಳಿಂದಂತೆ, ಆಸ್ಟ್ರೇಲಿಯಾ ಹಾಗೂ ನೇದರ್ಲೆಂಡ್ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.ಜರ್ಮನಿ ಹಾಗೂ ಇಂಗ್ಲೆಂಡ್ ತಂಡಗಳು ಕ್ರಮವಾಗಿ ಆರು ಮತ್ತು ಏಳನೇ ಸ್ಥಾನದಲ್ಲಿವೆ. ಕಳೆದ ಫೆಬ್ರುವರಿಯಲ್ಲಿ ನ್ಯೂಜಿಲೆಂಡ್ ತಂಡ ಎಫ್ಐಎಚ್ ಹಾಕಿ ಪ್ರೊ ಲೀಗ್ ಎರಡು ಪಂದ್ಯಗಳಲ್ಲಿ ಜಯ ದಾಖಲಿಸಿತ್ತು. ಇದರ ಫಲವಾಗಿ ಎಂಟನೇ ಸ್ಥಾನಕ್ಕೆ ಮರಳಿತು. ಆದರೆ, ಸ್ಪೇನ್ ಒಂಬತ್ತನೇ ಸ್ಥಾನಕ್ಕೆ ಕುಸಿಯಿತು.ಮಹಿಳಾ ಎಫ್ಐಎಚ್ ಶ್ರೇಯಾಂಕದಲ್ಲಿ ನೇದರ್ಲೆಂಡ್ ತಂಡ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಬ್ಯೂನಸ್ ಐರಿಸ್ನಲ್ಲಿ ರುರೋಪಿಯನ್ ಚಾಂಪಿಯನ್ ತಂಡವನ್ನು ಅರ್ಜೆಂಟೀನಾ 2-0 ಅಂತರದಲ್ಲಿ ಮಣಿಸುವ ಮೂಲಕ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆದರೆ, ರಾಣಿ ರಾಂಪಾಲ್ ನಾಯಕತ್ವದ ಭಾರತ ತಂಡ ಒಂಬತ್ತನೇ ಸ್ಥಾನದಲ್ಲಿ ಮುಂದುವರಿದಿದೆ.