ನವದೆಹಲಿ, ಫೆ 14, ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದು ದೇಶದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ ಗರಿಷ್ಠ ತಾಪಮಾನ 4 ಡಿಗ್ರಿ ಹೆಚ್ಚಳವಾದರೆ ಸಮುದ್ರದ ಮಟ್ಟ ಏರಿಕೆಯಾಗಿ ಕರಾವಳಿ ಪಟ್ಟಣಗಳು ಅಪೋಶನಕ್ಕೆ ಒಳಗಾಗಿ 5 ಕೋಟಿಗೂ ಹೆಚ್ಚಿನ ಜನರು ಶಾಶ್ವತವಾಗಿ ನೆಲೆ ಕಳೆದುಕೊಳ್ಳಲಿದ್ದಾರೆ. ಇದು ಭವಿಷ್ಯ ಭಾರಿ ಅನಾಹುತ ಮತ್ತು ವಿಪ್ಲವಗಳಿಗೂ ಕಾರಣವಾಗಲಿದೆ ಎಂಬ ಆತಂಕಕಾರಿ ಅಂಶ ಫ್ಯೂಚರ್ ಅರ್ತ್ ಸಂಸ್ಥೆಯ ವರದಿಯಲ್ಲಿ ಬಹಿರಂಗವಾಗಿದೆ. ಹೆಚ್ಚುತ್ತಿರುವ ತಾಪಮಾನವು ಕೃಷಿ ಕ್ಷೇತ್ರದ ಮೇಲೆಯೂ ಬಹಳ ಕೆಟ್ಟ ಪರಿಣಾಮ ಬೀರಲಿದ್ದು, ಇದು ತೀವ್ರ ಜಲ ಮತ್ತು ಆಹಾರ ಬಿಕ್ಕಟ್ಟಿಗೂ ಕಾರಣವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.ಫ್ಯೂಚರ್ ಅರ್ತ್ ಸಂಸ್ಥೆಯ ನೇತೃತ್ವದಲ್ಲಿ 52 ದೇಶಗಳ 200 ಕಕ್ಉ ಹೆಚ್ಚು ಪರಿಣಿತ ವಿಜ್ಞಾನಿಗಳ ತಂಡ ಸಿದ್ಧಪಡಿಸಿದ್ದ 'ಭೂಮಿಯ ಮೇಲೆ ನಮ್ಮ ಭವಿಷ್ಯ' ಎಂಬ ಸಂಶೋಧನಾ ವರದಿಯನ್ನು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ. ಜಗತ್ತಿನಲ್ಲಿ ಪ್ರತಿ ವರ್ಷ 30 ಕೋಟಿ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅಷ್ಟೇ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವೂ ಸಮುದ್ರ ಸೇರುತ್ತಿದೆ ಎಂಬ ಆಘಾತಕಾರಿ ಅಂಶ ಸಹ ವರದಿಯಲ್ಲಿ ಉಲ್ಲೇಖವಾಗಿದೆ.