ರಜೌರಿ ಹೆದ್ದಾರಿಯಲ್ಲಿ ಐಇಡಿ ಸ್ಫೋಟಕ ಪತ್ತೆ; ಸಂಚಾರಕ್ಕೆ ಅಡಚಣೆ

ಜಮ್ಮು, ನ.19 :       ಜಮ್ಮು ಮತ್ತು ಕಾಶ್ಮೀರದ ರಜೌರಿ ಹೆದ್ದಾರಿಯ ಆರ್ಒಪಿ ಬಳಿ ಸಂಶಯಾಸ್ಪದ ಐಇಡಿ ಸ್ಫೋಟಕ ಮಂಗಳವಾರ ಬೆಳಗ್ಗೆ ಪತ್ತೆಯಾದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸೇನೆಯ ಆರ್ಒಪಿ, ರಜೌರಿ ಹೆದ್ದಾರಿಯಲ್ಲಿ ಸಂಶಯಾಸ್ಪದ ಸ್ಫೋಟಕವನ್ನು ಮೊದಲು ನೋಡಿದೆ, ತಕ್ಷಣ ಬಾಂಬ್ ನಿಷ್ಕ್ರಿಯ ತಂಡ ಸ್ಥಳಕ್ಕೆ ಧಾವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಸ್ತೆಯ ಉಭಯ ಕಡೆಯಿಂದಲೂ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅದು ಐಇಡಿ ಅಥವಾ ಕಚ್ಚಾ ಸ್ಫೋಟಕವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಬಳಿಕ ವಾಹನ ಸಂಚಾರ ಆರಂಭಗೊಂಡಿತು ಎಂದು ಅವರು ಮಾಹಿತಿ ನೀಡಿದ್ದಾರೆ.