ನವದೆಹಲಿ, ಏ 9,ಟೀಮ್ ಇಂಡಿಯಾದ ಭವಿಷ್ಯದ ತಾರೆ ಎಂದೇ ಗುರುತಿಸಿಕೊಂಡಿರುವ ಓಪನಿಂಗ್ ಬ್ಯಾಟ್ಸ್‌ಮನ್ ಪೃಥ್ವಿ ಶಾ, ಟೀಮ್ ಇಂಡಿಯಾಗೆ ಕಾಲಿಟ್ಟ ಕೆಲವೇ ಸಮಯದಲ್ಲಿ ಅನಗತ್ಯ ಕಾರಣಕ್ಕೆ ಅನುಭವಿಸಿದ್ದ ಚಿತ್ರಹಿಂಸೆ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ.ಟೆಸ್ಟ್ ಕ್ರಿಕೆಟ್ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿ ಶತಕ ಬಾರಿಸುವ ಮೂಲಕ ಮಿಂಚಿದ್ದ ಪೃಥ್ವಿ ಶಾ, ಇನ್ನೇನು ಭಾರತ ಟೆಸ್ಟ್ ತಂಡದಲ್ಲಿ ಆರಂಭಿಕನ ಸ್ಥಾನವನ್ನು ಭದ್ರ ಪಡಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಪಾದದ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಬಿದ್ದರು.ನಂತರ ಗಾಯದ ಮೇಲೆ ಬರೆ ಎಂಬಂತೆ ಕೆಮ್ಮಿನ ನಿವಾರಣೆ ಸಲುವಾಗಿ ತೆಗೆದುಕೊಂಡಿದ್ದ ಸಿರಪ್ ಒಂದರಲ್ಲಿ ನಿಷೇಧಿತ ಮದ್ದು ಇದ್ದ ಕಾರಣ ಡೋಪಿಂಗ್ ಪರೀಕ್ಷೆ ವೇಳೆ ಅದು ಪತ್ತೆಯಾಗಿ 8 ತಿಂಗಳ ನಿಷೇಧ ಶಿಕ್ಷೆಗೆ ಗುರಿಯಾದರು. ನಿಷೇಧದ ಕಾರಣ ಕ್ರಿಕೆಟ್‌ನಿಂದ ದೂರ ಉಳಿಯುವಂತಾದ ಆ ದಿನಗಳಲ್ಲಿ ಚಿತ್ರಹಿಂಸೆ ಅನುಭವಿಸಿದ್ದಾಗಿ ಪೃಥ್ವಿ ಶಾ ಹೇಳಿಕೊಂಡಿದ್ದಾರೆ."ನೀವು ಯಾವುದೇ ಔಷಧವನ್ನು ತೆಗೆದುಕೊಳ್ಳುವಾಗ ಬಹಳ ಎಚ್ಚರದಿಂದ ಇರಬೇಕು. ಜ್ವರಕ್ಕಾಗಿ ಸೇವಿಸಲು ಪ್ಯಾರಸೆಟಿಮಾಲ್ ಕೂಡ ಎಚ್ಚರದಿಂದ ಸೇವಿಸಬೇಕು. ಇವೆಲ್ಲವೂ ಬಹಳ ಪರಿಣಾಮಕಾರಿ ಎಂದು ಮುಂಬರುವ ಯುವ ಆಟಗಾರರಿಗೆ ತಿಳಿಸಲು ಇಚ್ಛಿಸುತ್ತೇನೆ," ಎಂದು ಸಂದರ್ಶನದಲ್ಲಿ ಪೃಥ್ವಿ ಶಾ ಹೇಳಿದ್ದಾರೆ.