ಬೆಂಗಳೂರು, ಆ 25 ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲು ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದರಾಮಯ್ಯ ಅವರೇ ಮೂಲ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ವೆಬ್ಸೈಟ್ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ತಮಗೆ ಹೆಸರಿಗಷ್ಟೇ ಮುಖ್ಯಮಂತ್ರಿ ಹೆದ್ದೆ ಇತ್ತು. ಆದರೆ, ಸರ್ಕಾರಿ ಕಚೇರಿಯಲ್ಲಿ ಮೊದಲ ದರ್ಜೆ ಗುಮಾಸ್ತನ ರೀತಿ ಕೆಲಸ ಮಾಡಿದ್ದೆ. ಸಿದ್ದರಾಮಯ್ಯ ಅವರು ಮತ್ತೇ ಮುಖ್ಯಮಂತ್ರಿಯಾಗಬೇಕೆಂದು ಕನಸು ಕಾಣುತ್ತಿದ್ದಾರೆ. ಉದ್ದೇಶ ಪೂರ್ವಕವಾಗಿಯೇ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಸರ್ಕಾರವನ್ನು ಪತನಗೊಳಿಸಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಅವರು ಸರ್ಕಾರ ನಡೆಸಲು ವಿಫಲರಾಗಿ ಸರ್ಕಾರ ಪತನಗೊಂಡರೆ ಮತ್ತೇ ತಾವೇ ಮುಖ್ಯಮಂತ್ರಿಯಾಗಬಹುದು ಎಂಬ ಲೆಕ್ಕಚಾರದಲ್ಲಿ ಸಿದ್ದರಾಮಯ್ಯ ದೂರಗಾಮಿ ತಂತ್ರಗಾರಿಕೆ ಹಣೆದಿದ್ದಾರೆ ಎಂದು ಕುಮಾರ ಸ್ವಾಮಿ ಹೇಳಿದ್ದಾರೆ. ಮೊದಲ ಶತೃ ಸಿದ್ದರಾಮಯ್ಯ: ಸಿದ್ದರಾಮಯ್ಯ ಅವರೇ ನನ್ನ ಮೊದಲ ಶತ್ರು, ಬಿಜೆಪಿಯಲ್ಲ ಎಂದು ಕುಮಾರಸ್ವಾಮಿ ಹೇಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ತಮ್ಮೊಳಗೆ ಕುದಿಯುತ್ತಿದ್ದ ಆಕ್ರೋಶವನ್ನು ಕಾರಿಕೊಂಡಿದ್ದಾರೆ. ಕಳೆದ 14 ತಿಂಗಳ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಅವರೇ ನೇರ ಹೊಣೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ ದೇವೇಗೌಡ ಕಳೆದ ಮೂರು ದಿನಗಳಿಂದ ನಿರಂತರವಾಗಿ ಆರೋಪಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಅವರ ಪುತ್ರ ಕುಮಾರಸ್ವಾಮಿ ಅವರು ಸಹ ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಸಿದ್ಧರಾಮಯ್ಯ ವಿರುದ್ಧ ಇದೇ ಮೊದಲ ಬಾರಿಗೆ ನೇರವಾಗಿ ಆರೋಪಗಳ ಸುರಿಮಳೆ ಗೈದಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದನ್ನು ಮೊದಲಿನಿಂದಲೂ ಸಹಿಸಿಕೊಳ್ಳಲಾಗದ ಸಿದ್ದರಾಮಯ್ಯ ತಮ್ಮ ಆಪ್ತ ಶಾಸಕರನ್ನು ಮೈತ್ರಿ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಮೂಲಕ ಸರ್ಕಾರದ ಪತನಕ್ಕೆ ಕಾರಣರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮೈತ್ರಿ ಸರ್ಕಾರ ಮುಂದುವರಿಯಬೇಕೆಂಬುದು ಕಾಂಗ್ರೆಸ್ ಹೈಕಮಾಂಡ್ ಆಶಯವಾಗಿತ್ತು. ಆದರೆ, ಸರ್ಕಾರ ಮುಂದುವರಿಯುವುದು ಸಿದ್ದರಾಮಯ್ಯ ಅವರಿಗೆ ಸ್ವಲ್ಪವೂ ಇಷ್ಟವಿಲ್ಲ. ಪ್ರತಿನಿತ್ಯ ಸರ್ಕಾರ ಪತನಗೊಳಿಸಲು ಪ್ರಯತ್ನಿಸುತ್ತಿದ್ದರು. ಮುಖ್ಯಮಂತ್ರಿ ಸ್ಥಾನದಿಂದ ತಮ್ಮನ್ನು ಕೆಳಗೆ ಇಳಿಸಲು ಕುತಂತ್ರ ರಾಜಕಾರಣ ಮಾಡಿದರು ಸಿದ್ದರಾಮಯ್ಯ ಎಂದು ನೇರ ಆರೋಪ ಮಾಡಿದ್ದಾರೆ. ಮೈತ್ರಿ ಸರ್ಕರದ ಪತನಕ್ಕೆ ಸಿದ್ದರಾಮಯ್ಯ ನೇರ ಹೊಣೆ ಎಂಬ ದೇವೇಗೌಡರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಸರ್ಕಾರದ ಪತನಕ್ಕೆ ದೇವೇಗೌಡ, ಕುಮಾರಸ್ವಾಮಿ ಹಾಗೂ ಎಚ್.ಡಿ ರೇವಣ್ಣ ಅವರೇ ಕಾರಣ. ಸರ್ಕಾರ ಉರುಳುವಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಈ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಲು ಮುಂದಾಗದ ಕುಮಾರಸ್ವಾಮಿ, ಟ್ವೀಟ್ ಮೂಲಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಲು ಇದು ಸಕಾಲವಲ್ಲ. ಸಮಯ ಬಂದಾಗ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ಹೇಳಿದ್ದರು. ಅದರಂತೆ ಈ ಸಂದರ್ಶನದಲ್ಲಿ ಅವರು, ಸಿದ್ದರಾಮಯ್ಯ ವಿರುದ್ಧ ತಮ್ಮ ಮನದಾಳದಲ್ಲಿ ಮನೆ ಮಾಡಿದ್ದ ಆಕ್ರೋಶವನ್ನು ಬಹಿರಂಗಪಡಿಸಿದ್ದಾರೆ. ಸಿದ್ದರಾಮಯ್ಯ ಅವರೇ ನನ್ನ ಮೊದಲ ಶತೃ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಅವರ ಆಪ್ತ ಶಾಸಕರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿಕೊಂಡು ಬಂದಿದ್ದರು. ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ಶಾಸಕರ ರಾಜೀನಾಮೆಗೂ ಅವರೇ ಕಾರಣ ಎಂದು ಆರೋಪಿಸಿದ್ದರು. ಮುಖ್ಯಮಂತ್ರಿಯಾಗಿ ನಾನು ಕೈಗೊಂಡ ಕೆಲವು ತೀರ್ಮಾನಗಳನ್ನು ಸಹಿಸಿಕೊಳ್ಳದೆ ಸರ್ಕಾರ ಪತನಕ್ಕೆ ನಿರಂತರ ಪ್ರಯತ್ನ ಮಾಡಿದ್ದರು. ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಿಬಿಐ ತನಿಖೆಗೆ ವಹಿಸಿರುವುದರ ಹಿಂದೆ ಸಿದ್ದರಾಮಯ್ಯ ಅವರ ಕರಾಮತ್ತು ಇದೆ. ಯಡಿಯೂರಪ್ಪ ಸಚಿವ ಸಂಪುಟ ರಚನೆ ಮಾಡುವ ಮುನ್ನವೇ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಲು ಸಿದ್ದರಾಮಯ್ಯ ಅವರ ಪಾತ್ರ ಇರುವುದು ಸ್ಪಷ್ಟವಾಗಿದೆ ಎಂದಿದ್ದಾರೆ. ಅತೃಪ್ತ ಶಾಸಕರು ಮೈತ್ರಿ ಸರ್ಕಾರದ ಅವಧಿಯಲ್ಲಿ ಬೆಂಬಲ ನೀಡಲು ಮುಂದಾಗಿದ್ದರೂ ಸಿದ್ದರಾಮಯ್ಯ ಅದಕ್ಕೂ ಅಡ್ಡಿ ಮಾಡಿದ್ದರು. ತಮ್ಮ ಬೆಂಬಲಿಗರನ್ನು ಸರ್ಕಾರದ ವಿರುದ್ಧ ಛೂ ಬಿಟ್ಟಿದ್ದರು. ಅತೃಪ್ತ ಶಾಸಕರನ್ನು ವಿಶೇಷ ವಿಮಾನದಲ್ಲಿ ಕಳುಹಿಸುವ ಮೂಲಕ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಮಾತಿಗೆ ಕಿಮ್ಮತ್ತು ಬೆಲೆ ನೀಡಿರಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.