ನವದೆಹಲಿ, ಮೇ 3,ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ, ತಮ್ಮ ಜೀವನದಲ್ಲಿ 2018ರಲ್ಲಿ ಅನುಭವಿಸಿದ ಕಷ್ಟದ ದಿನಗಳಲ್ಲಿ ಮೂರು ಬಾರಿ ಆತ್ಮಹತ್ಯೆಗೆ ಆಲೋಚಿಸಿದ್ದಾಗಿ ಶನಿವಾರ ಬಹಿರಂಗಪಡಿಸಿದ್ದಾರೆ.ಶಮಿ ಅವರ ಪತ್ನಿ ಹಸೀನ್ ಹಜಾನ್, ಟೀಮ್ ಇಂಡಿಯಾ ವೇಗಿ ವಿರುದ್ಧ ಹಲ್ಲೆ ಮತ್ತು ದೌರ್ಜನ್ಯದ ಪ್ರಕರಣ ದಾಖಲಿಸಿದ್ದರು. ಈ ಸಲುವಾಗಿ ಸಾಮಾಜಿಕ ತಾಣಗಳಲ್ಲಿ ಶಮಿ ವಿರುದ್ಧ ಅಭಿಮಾನಿಗಳು ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದರು."2018ರ ಅವಧಿಯಲ್ಲಿ ನನ್ನ ವೈಯಕ್ತಿಕ ಜೀವನ ಹದಗೆಟ್ಟಿತ್ತು. ಇದೇ ಕಾರಣಕ್ಕೆ ನಾನು ಮೂರು ಬಾರಿ ಆತ್ಮಹತ್ಯೆಗೆ ಆಲೋಚಿಸಿದ್ದೆ ಎಂದರೆ ನಿಮಗೆ ಅಚ್ಚರಿ ಆಗಬಹುದು," ಎಂದು ಟೀಮ್ ಇಂಡಿಯಾದ ಓಪನರ್ ರೋಹಿತ್ ಶರ್ಮ ಜತೆಗೆ ನಡೆಸಿದ ಇನ್‌ಸ್ಟಾಗ್ರಾಮ್ ಲೈವ್ ಚಾಟ್‌ನಲ್ಲಿ ಶಮಿ ಹೇಳಿಕೊಂಡಿದ್ದಾರೆ."ದುಡುಕಿ ನಾನೇನಾದರೂ ಆಪತ್ತು ತಂದುಕೊಳ್ಳುತ್ತೇನೆಂದು ನನ್ನ ಕುಟುಂಬದವರು ಹೆದರಿದ್ದರು. ಆ ಸಮಯದಲ್ಲಿ ಕ್ರಿಕೆಟ್ ಕಡೆಗೆ ಗಮನ ನೀಡಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಬಳಿಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ ಎಂದು ನನ್ನ ಕುಟುಂಬದವರು ತಿಳಿ ಹೇಳಿದರು. ಏಷ್ಟೇ ದೊಡ್ಡ ಸಮಸ್ಯೆಯಾದರೂ ಪರಿಹಾರ ಸಿಗುತ್ತದೆ ಎಂದು ಅರ್ಥಮಾಡಿಸಿದರು. ನನ್ನ ಸಹೋದರ ಬೆಂಬಲಕ್ಕೆ ನಿಂತ. ನನ್ನ ಒಂದಿಬ್ಬರು ಸೇಹಿತರು ನನ್ನೊಟ್ಟಿಗೆ ದಿನದ 24 ಗಂಟೆಗಳ ಕಾಲ ಉಳಿದುಕೊಂಡಿದ್ದರು," ಎಂದು ಶಮಿ ವಿವರಿಸಿದ್ದಾರೆ.ಭಾರತ ತಂಡದ ಪರ 49 ಟೆಸ್ಟ್, 77 ಒಡಿಐ ಮತ್ತು 11 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ 29 ವರ್ಷದ ಬಲಗೈ ವೇಗದ ಬೌಲರ್ ಶಮಿ, ಕ್ರಮವಾಗಿ 180, 144 ಮತ್ತು 12 ವಿಕೆಟ್‌ಗಳನ್ನು ಪಡೆದಿದ್ದಾರೆ.